ದೇಶ

ಕಾಂಗ್ರೆಸ್ ಪರ್ಯಾಯ ರಾಜಕೀಯ ಪಕ್ಷವಾಗಿ ಉಳಿದಿಲ್ಲ: ಕಪಿಲ್ ಸಿಬಲ್

Lingaraj Badiger

ನವದೆಹಲಿ: ಕಾಂಗ್ರೆಸ್ ದೇಶಕ್ಕೆ, ಪರಿಣಾಮಕಾರಿ- ಪರ್ಯಾಯ ಆಡಳಿತ ನೀಡಬಲ್ಲ ಪಕ್ಷ ಎಂಬುದನ್ನು ಬಿಹಾರದ ಜನರಷ್ಟೇ ಅಲ್ಲ, ದೇಶದ ಜನರೂ ಸಹ ಒಪ್ಪಿಕೊಳ್ಳಲು ಸಿದ್ದರಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಆತ್ಮಾವಲೋಕದ ಸಮಯ ಮುಕ್ತಾಯವಾಗಿದೆ. ಪರ್ಯಾಯ ಪಕ್ಷವನ್ನಾಗಿ ಜನ ಪರಿಗಣಿಸುವ ಯೋಗ್ಯತೆಯನ್ನು ಪಕ್ಷ ಉಳಿಸಿಕೊಂಡಿಲ್ಲ ಎಂಬ ಅವರ ಹೇಳಿಕೆ ಕಾಂಗ್ರೆಸ್ ಮತ್ತು ದೇಶ ರಾಜಕೀಯ ವಲಯದಲ್ಲಿ ಭಾರಿ ಮಿಂಚಿನ ಸಂಚಲನ, ತಲ್ಲಣ ಮೂಡಿಸಿದೆ.

ಇದರಿಂದ ಪಕ್ಷದೊಳಗೆ ನಾಯಕತ್ವದ ವಿಚಾರದಲ್ಲಿ ಮತ್ತೊಂದು ಸುತ್ತಿನ ಅಸಮಾಧಾನ, ಭಿನ್ನಮತ ಭುಗಿಲೇಳುವ ಲಕ್ಷಣಗಳು ಗೋಚರಿಸಿವೆ. ಪರಿಣಾಮಕಾರಿ ಪರ್ಯಾಯ ಆಡಳಿತ ನೀಡಬಲ್ಲ ಪಕ್ಷ ಕಾಂಗ್ರೆಸ್ ಎಂಬುದನ್ನು ಬಿಹಾರದ ಜನರಷ್ಟೇ ಅಲ್ಲ, ದೇಶದ ಜನರೂ ಒಪ್ಪಿಕೊಳ್ಳುತ್ತಿಲ್ಲ. ಎಲ್ಲೆಲ್ಲಿ ಉಪಚುನಾವಣೆಗಳು ನಡೆದಿವೆಯೋ ಅಲ್ಲೆಲ್ಲ ಕಾಂಗ್ರೆಸ್ ಸೋಲು ಅನುಭವಿಸಿದೆ.
ಬಿಹಾರದ ಫಲಿತಾಂಶ ನೋಡಿ ಅಲ್ಲಿ ಪರ್ಯಾಯವಾಗಿ ಜನರಿಗೆ ಕಾಣಿಸಿದ್ದು ಆರ್ಜೆಡಿಯೇ ಹೊರತು ಕಾಂಗ್ರೆಸ್ ಪಕ್ಷವಲ್ಲ. ಗುಜರಾತ್ ನೋಡಿ ಅಲ್ಲಿ ಉಪಚುನಾವಣೆಯಲ್ಲಿ ಗೆಲ್ಲಲಾಗಿಲ್ಲ. ಲೋಕಸಭಾ ಉಪ ಚುನಾವಣೆಯಲ್ಲಿ ಒಂದೇ ಒಂದು ಸೀಟೂ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡಲಿದೆ ಎಂಬ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ತಾರೀಕ್ ಅನ್ವರ್ ಅವರ ಸಲಹೆಯನ್ನು ಉಲ್ಲೇಖಿಸಿದ ಸಿಬಲ್, ಕಳೆದ ಆರು ವರ್ಷಗಳಲ್ಲಿ ಕಾಂಗ್ರೆಸ್ ಆತ್ಮಾವಲೋಕ ಮಾಡಿಲ್ಲ ಎಂದಾದರೆ, ಈಗ ಆತ್ಮಾವಲೋಕನ ಮಾಡುವುದರಿಂದ ಆಗಬಹುದಾದ ಪ್ರಯೋಜನದ ಬಗ್ಗೆ ಯಾವ ಭರವಸೆ ಇಟ್ಟುಕೊಳ್ಳಬಹುದು ಎಂದೂ ಸಿಬಲ್ ಪ್ರಶ್ನೆ ಮಾಡಿದ್ದಾರೆ. 

SCROLL FOR NEXT