ದೇಶ

ಸತತ 9ನೇ ದಿನವೂ ದೇಶದಲ್ಲಿ ಕೊರೋನಾ ಪ್ರಕರಣ ಇಳಿಕೆ: ಇಂದು 30 ಸಾವಿರಕ್ಕಿಂತ ಕಡಿಮೆ ಕೇಸ್ ಪತ್ತೆ

Manjula VN

ನವದೆಹಲಿ: ಅತ್ತ ಯುರೋಪ್ ಮತ್ತು ಅಮೆರಿಕಾದಲ್ಲಿ ನಿತ್ಯ ಕೊರೋನಾ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದರೆ, ಭಾರತದಲ್ಲಿ ಕಳೆದ 9 ತಿನಗಳಿಂದ ನಿತ್ಯ 50,000ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿರುವುದು ಆಶಾದಾಯಕವಾಗಿದೆ. ಮಂಗಳವಾರ ಬೆಳಿಗ್ಗೆ 8 ಗಂಟೆವರೆಗಿನ 24 ಗಂಟೆಯ ಅವಧಿಯಲ್ಲಿ ದೇಶದಲ್ಲಿ 30 ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. 

ದೇಶದಲ್ಲಿಂದು 29,164 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 88,74,291ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ಇನ್ನು ದೇಶದಲ್ಲಿ ಸಾವಿನ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ನಿನ್ನೆ 449 ಮಂದಿ ಸೋಂಕಿನಿಂದ ಸಾವನ್ನಪ್ಪಿರುವುದು ವರದಿಯಾಗಿದೆ. ದೇಶದಲ್ಲಿ ಈ ವರೆಗೂ ಮಹಾಮಾರಿ ಆರ್ಭಟಕ್ಕೆ ಒಟ್ಟು  1,30,519 ಮಂದಿ ಬಲಿಯಾಗಿದ್ದಾರೆ.
 
ಈ ನಡುವೆ ದೇಶದಲ್ಲಿ ಪತ್ತೆಯಾಗಿರುವ ಒಟ್ಟಾರೆ 88,74,291 ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 40,791 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ದೇಶದಲ್ಲಿ ಸೋಂಕಿನಿಂತ ಚೇತರಿಸಿಕೊಂಡವರ ಸಂಖ್ಯೆ 82,90,371ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,53,401ಕ್ಕೆ ಇಳಿಕೆಯಾಗಿದೆ. 

ಇನ್ನು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 8,44,382 ಸ್ಯಾಂಪಲ್ಸ್ ಗಳನ್ನು ಪರೀಕ್ಷೆ ನಡೆಸಲಾಗಿದ್ದು, ಇದರೊಂದಿಗೆ ದೇಶದಲ್ಲಿ ಈ ವರೆಗೂ 12,65,42,907 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

SCROLL FOR NEXT