ದೇಶ

ಕೊರೋನಾ ಸವಾಲಿನ ನಡುವೆ ಬಿಹಾರ ಚುನಾವಣೆಯನ್ನು ಸುರಕ್ಷಿತವಾಗಿ ನಡೆಸಿದ್ದೇವೆ: ಸಿಇಸಿ

Lingaraj Badiger

ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಚುನಾವಣಾ ಆಯೋಗವು ಬಿಹಾರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದಾಗ, ಕೆಲವರು ಇದನ್ನು "ಹುಚ್ಚು ಸಾಹಸ" ಎಂದು ಭಾವಿಸಿದರು. ಆದರೆ ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಿ ಚುನಾವಣೆ ನಡೆಸಿದ ನಂತರ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಬುಧವಾರ ಹೇಳಿದ್ದಾರೆ.

ಬಿಹಾರ ಚುನಾವಣೆ ನಂತರ ಮುಂಬರುವ ಇತರೆ ವಿಧಾನಸಭಾ ಚುನಾವಣೆಗಳನ್ನು ಸಮಯಕ್ಕೆ ಸರಿಯಾಗಿ ನಡೆಸಲು ಆಯೋಗಕ್ಕೆ ಸಾಧ್ಯವಾಗುತ್ತದೆ ಎಂಬ ವಿಶ್ವಾಸ ಬಂದಿದೆ ಮತ್ತು ಈಗಾಗಲೇ ಅದಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಅರೋರಾ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದ ಮಧ್ಯೆ ಬಿಹಾರ ಚುನಾವಣೆಯನ್ನು ನಡೆಸುವ ಮೂಲಕ ಚುನಾವಣಾ ಆಯೋಗ "ದುಸ್ಸಾಹಾಸ್" ಮಾಡುತ್ತಿದೆ ಎನ್ನಲಾಗಿತ್ತು. ಆದರೆ ಈ ಚುನಾವಣೆ ಆಯೋಗದ ಪ್ರತಿಯೊಬ್ಬರಿಗೂ ವಿಶ್ವಾಸ ಹೆಚ್ಚಿಸಿದೆ ಎಂದಿದ್ದಾರೆ.

ಮುಂದಿನ ವರ್ಷ ಮೇ-ಜೂನ್‌ನಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ನಾಲ್ಕು ರಾಜ್ಯಗಳ ಚುನಾವಣೆಗೆ ಆಯೋಗ ಈಗಾಗಲೇ ಸಿದ್ಧತೆ ನಡೆಸಿದೆ.

SCROLL FOR NEXT