ದೇಶ

ಜಮ್ಮು: ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳಿಂದ ನಾಲ್ವರು ಉಗ್ರರ ಹತ್ಯೆ

Nagaraja AB

ಜಮ್ಮು: ಜಮ್ಮುವಿನ ನಾಗ್ರೋಟಾದ ಬಳಿಯ ಬಾನ್ ಟೋಲ್ ಪ್ಲಾಜಾ ಬಳಿ ಇಂದು ಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

ಈ ಪ್ರದೇಶದಲ್ಲಿ ಉಗ್ರರು ಅಡಗಿದ್ದ ಶಂಕೆ ಮೇರೆಗೆ  ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು  ಕೆಲವು ಗಂಟೆಗಳ ಕಾಲ ಮುಚ್ಚಿ ಕಾರ್ಯಾಚರಣೆ ನಡೆಸಲಾಗಿದೆ. 

ಬಾನ್ ಟೋಲ್  ಪ್ಲಾಜಾ ಬಳಿ ಭದ್ರತಾ ಪಡೆಗಳು ನಾಕಾ ಬಂದಿ ಹಾಕಿ, ವಾಹನಗಳ ತಪಾಸಣೆ ನಡೆಸುವಾಗ ಉಗ್ರರ ಗುಂಪೊಂದು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿ, ಅರಣ್ಯದತ್ತ ಓಡಿದ್ದಾರೆ. ತಕ್ಷಣವೇ ಬೆಳಗ್ಗೆ 5 ಗಂಟೆ ಸಮಯದಲ್ಲಿ ಎನ್ ಕೌಂಟರ್ ಆರಂಭಿಸಲಾಗಿದೆ.

ಗುಂಡಿನ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಭದ್ರತಾ ಪಡೆಯಲ್ಲಿದ್ದ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮತ್ತೊಂದೆಡೆ ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಹರಿನಗರ ವಲಯದಲ್ಲಿ ಪಾಕ್ ರೆಂಜರ್ ಗಳು ಕದನ ವಿರಾಮ ಉಲ್ಲಂಘಿಸಿ, ನಾಗರಿಕ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಗುಂಡಿನ ದಾಳಿ ನಡೆಸಿದ್ದರಿಂದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಇತರ ಕೆಲವು ಮನೆಗಳಿಗೆ ಭಾಗಶ: ಹಾನಿಯಾಗಿವೆ.

ಗಾಯಾಳು ಮಹಿಳೆಯನ್ನು ನಿಶಾ ದೇವಿ ಎಂದು ಗುರುತಿಸಲಾಗಿದ್ದು, ಆಕೆಯನ್ನು ಕುಥಾವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಅಲ್ಲಿಂದ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲು ಶಿಫಾರಸು ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT