ದೇಶ

ಬಿಹಾರ: ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್ ಮುಖಂಡರು, ರಾಜೀನಾಮೆಗೆ ಮುಂದು; ಕಳಪೆ ಪ್ರದರ್ಶನ ಬಗ್ಗೆ ಸಮಗ್ರ ಪರಾಮರ್ಶೆಗೆ ಒತ್ತಾಯ

Nagaraja AB

ನವದೆಹಲಿ: ಇತ್ತೀಚಿಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಹಿನ್ನೆಲೆಯಲ್ಲಿ ಅಲ್ಲಿನ ಹಿರಿಯ ಕಾಂಗ್ರೆಸ್ ಮುಖಂಡರು ರಾಜೀನಾಮೆಗೆ ಮುಂದಾಗಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಸಾಧನೆ ಬಗ್ಗೆ ಸಮಗ್ರ ಪರಿಶೀಲನೆಗೆ ಕರೆ ನೀಡಿರುವ ಕಾಂಗ್ರೆಸ್ ಮುಖಂಡರು, ಹೈ-ಕಮಾಂಡ್‌ನ ನಿರ್ದೇಶನಗಳ ನಂತರ  ಈ ಬಗ್ಗೆ ಮತ್ತಷ್ಟು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಬಿಹಾರ ಎಐಸಿಸಿ ಉಸ್ತುವಾರಿ ಶಕ್ತಿಸಿನ್ಹಾ ಗೊಹಿಲ್ ಮತ್ತಿತರ ಮುಖಂಡರು ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ಹೈಕಮಾಂಡ್ ಗೆ ಸಲ್ಲಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. 

 ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಮಧನ್ ಮೋಹನ್ ಝಾ ಕೂಡಾ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ, ಹೈ ಕಮಾಂಡ್ ಮುಂದಿನ ನಿರ್ದೇಶನಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.

ಇದು ಕ್ರಮದ ಸಮಯವಾಗಿದೆ ಎಂದು ಹಿರಿಯ ಮುಖಂಡ ಕಪಿಲ್ ಸಿಬಲ್ ಹೇಳಿರುವಂತೆಯೇ, ಬಿಹಾರ ಚುನಾವಣೆಯಲ್ಲಿನ ಕಳಪೆ ಸಾಧನೆ ಬಗ್ಗೆ ವಿಮರ್ಶೆ ನಡೆಯಬೇಕೆಂದು ಕೆಲ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ. 

ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಖ್ ಅನ್ವರ್ ಸೇರಿದಂತೆ ಅನೇಕ ಮುಖಂಡರು ಇದೇ ರೀತಿಯ ಮಾತುಗಳನ್ನಾಡಿದ್ದಾರೆ. ಬಿಹಾರದಲ್ಲಿ ಪಕ್ಷದ ಸಾಧನೆ ಕುರಿತು ಸಮಗ್ರ ವಿಮರ್ಶೆ ನಡೆಯಬೇಕು ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 19ರಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

SCROLL FOR NEXT