ದೇಶ

ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಏಕೆ ಎಚ್ಚೆತ್ತುಕೊಳ್ಳಲಿಲ್ಲ?: ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

Lingaraj Badiger

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿದ್ದರೂ ನೀವು ಏಕೆ ಎಚ್ಚೆತ್ತುಕೊಳ್ಳಲಿಲ್ಲ? ಎಂದು ದೆಹಲಿ ಹೈಕೋರ್ಟ್ ಗುರುವಾರ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಕೋವಿಡ್- 19 ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು ಎಂದು ಕೋರಿ ವಕೀಲ ರಾಕೇಶ್ ಮಲ್ಹೋತ್ರಾ ಅವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಾಮೂರ್ತಿಗಳಾದ ಹಿಮಾ ಕೊಹ್ಲಿ, ಸುಬ್ರಮೋನಿಯಂ ಪ್ರಸಾದ್ ಅವರ ಪೀಠ, ಕಳೆದ 18 ದಿನಗಳಲ್ಲಿ ಕೋವಿಡ್ -19 ನಿಂದ ಪ್ರಾಣ ಕಳೆದುಕೊಂಡವರ ಸಂಬಂಧಕರಿಗೆ ನೀವು ವಿವರಣೆ ನೀಡುತ್ತೀರಾ ಎಂದು ಕೇಜ್ರಿವಾಲ್ ಸರ್ಕಾರವನ್ನು ಪ್ರಶ್ನಿಸಿದೆ.

ಕೋರ್ಟ್ ಮಧ್ಯೆ ಪ್ರವೇಶಿಸುವವರೆಗೂ ನೀವು ಕೋವಿಡ್-19 ಹರಡುವುದನ್ನು ತಡೆಗಟ್ಟಲು ಮದುವೆಗಳಿಗೆ ಹಾಜರಾಗುವವರ ಸಂಖ್ಯೆಯನ್ನು 50ಕ್ಕೆ ಇಳಿಸುವಂತಹ ಕ್ರಮಗಳನ್ನು ಏಕೆ ತೆಗೆದುಕೊಳ್ಳಲಿಲ್ಲ? ಎಂದು ಹೈಕೋರ್ಟ್ ಪ್ರಶ್ನಿಸಿದೆ.

"ನೀವು(ದೆಹಲಿ ಸರ್ಕಾರ) ನವೆಂಬರ್ 1 ರಿಂದ ಯಾವ ರೀತಿಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದನ್ನು ನೋಡಿದ್ದೀರಿ. ಆದರೆ ನೀವು ಈಗ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿದ್ದೀರಿ. ಪ್ರಕರಣಗಳು ಏರಿಕೆಯಾಗುತ್ತಿದ್ದರೂ ನೀವು ಎಚ್ಚರಗೊಳ್ಳಲಿಲ್ಲ. "ನವೆಂಬರ್ 11 ರಂದು ನಾವು ನಿದ್ರೆಯಿಂದ ನಿಮ್ಮನ್ನು ಎಬ್ಬಿಸಬೇಕಾಯಿತು. ನವೆಂಬರ್ 1 ರಿಂದ ನವೆಂಬರ್ 11 ರವರೆಗೆ ನೀವು ಏನು ಮಾಡಿದ್ದೀರಿ? ನಿರ್ಧಾರ ತೆಗೆದುಕೊಳ್ಳಲು ನೀವು 18 ದಿನಗಳ(ನವೆಂಬರ್ 18 ರವರೆಗೆ)ವರೆಗೆ ಏಕೆ ಕಾಯುತ್ತಿದ್ದೀರಿ? ಈ 18 ದಿನಗಳಲ್ಲಿ ಎಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಜೀವ ಕಳೆದುಕೊಂಡವರ ಸಂಬಂಧಿಗಳಿಗೆ ನೀವು ಇದನ್ನು ವಿವರಿಸಬಹುದೇ?" ಎಂದು ನ್ಯಾಯಪೀಠ ಪ್ರಶ್ನಿಸಿದೆ.

SCROLL FOR NEXT