ದೇಶ

ಕೊರೋನಾ ವೈರಸ್ ಗೆ ಸುಪ್ರೀಂ ಕೋರ್ಟ್ ನಲ್ಲಿ ಮೊದಲ ಬಲಿ: ಹಿರಿಯ ಆಡಳಿತ ಸಿಬ್ಬಂದಿ ಸಾವು

Srinivasamurthy VN

ನವದೆಹಲಿ: ಮಾರಕ ಕೊರೋನಾ ವೈರಸ್ ಗೆ ಸುಪ್ರೀಂ ಕೋರ್ಟ್ ನಲ್ಲಿ ಮೊದಲ ಬಲಿಯಾಗಿದ್ದು, ಇತ್ತೀಚೆಗಷ್ಟೇ ಸೋಂಕಿಗೆ ತುತ್ತಾಗಿದ್ದ ಹಿರಿಯ ಆಡಳಿತ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೃತರನ್ನು ರಾಜೇಂದ್ರ ರಾವತ್ ಎಂದು ಗುರುತಿಸಲಾಗಿದ್ದು, ಅವರು ಎಸ್‌ಸಿಯ ಆಡಳಿತ ವಿಭಾಗದಲ್ಲಿದ್ದರು. ಐದು ದಿನಗಳ ಹಿಂದಷ್ಟೇ ಅವರ ಕೋವಿಡ್ -19 ಪರೀಕ್ಷೆ ಪಾಸಿಟಿವ್ ಬಂದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ಸುಪ್ರೀಂ ಕೋರ್ಟ್  ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾವತ್ ಅವರಿಗೆ ಸುಮಾರು 50 ವರ್ಷದ ರಾವತ್ ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಇದು ದೇಶದ ಉನ್ನತ ನ್ಯಾಯಾಲಯದಲ್ಲಿ ಸಂಭವಿಸಿದ ಮೊದಲ ಕೊರೋನಾ ಸಾವಾಗಿದೆ. 

ಮಾರಕ ಕೊರೋನಾ ವೈರಸ್ ನಿಂದಾಗಿ ಕೋರ್ಟ್ ಗಳ ಅವರಣದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮವಹಿಸಲಾಗಿದೆ. ಕೊರೋನಾ ವೈರಸ್ ಹರಡುವುದನ್ನು ನಿರ್ಬಂಧಿಸಲು ರಾಷ್ಟ್ರೀಯ ಲಾಕ್‌ಡೌನ್ ವಿಧಿಸುವ ಎರಡು ದಿನಗಳ ಮೊದಲು ಮಾರ್ಚ್ 23 ರಿಂದಲೇ ಸುಪ್ರೀಂ ಕೋರ್ಟ್  ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅರ್ಜಿಗಳ ವಿಚಾರಣೆ ಆಲಿಸುತ್ತಿದೆ. ಆದಾಗ್ಯೂ ಸುಪ್ರೀಂ ಕೋರ್ಟ್ ನಲ್ಲಿ ಸಾಕಷ್ಟು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.

ಆಗಸ್ಟ್ 19 ರವರೆಗೆ ಸುಪ್ರೀಂ ಕೋರ್ಟ್ ಗೆ ಸಂಬಂಧಿಸಿದ ಸುಮಾರು 125 ರಿಜಿಸ್ಟ್ರಿ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಈ ವೈರಸ್ ಸೋಂಕಿಗೆ ಒಳಗಾಗಿದ್ದರು. ಸಾಕಷ್ಟು ಸಾರ್ವಜನಿಕ ಸಾರಿಗೆ ಸೌಲಭ್ಯಗಳ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸುಪ್ರೀಂ ಕೋರ್ಟ್ ಕಡಿಮೆ  ಸಂಖ್ಯೆಯ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. 

SCROLL FOR NEXT