ದೇಶ

ಗುಜರಾತ್: ರಾಜ್ ಕೋಟ್ ನ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ಅವಘಡ, 5 ರೋಗಿಗಳು ಸಾವು, ತಲಾ 4 ಲಕ್ಷ ರೂ. ಪರಿಹಾರ ಘೋಷಣೆ

Sumana Upadhyaya

ರಾಜ್ ಕೋಟ್(ಗುಜರಾತ್): ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಗುಜರಾತ್ ರಾಜ್ಯದಲ್ಲಿ ಪುನರಾವರ್ತಿಸಿದೆ.

ಈ ಬಾರಿ ಗುಜರಾತ್ ನ ರಾಜ್ ಕೋಟ್ ನಗರದ ಮಾವ್ಡಿ ಪ್ರದೇಶದ ಉದಯ್ ಶಿವಾನಂದ್ ಕೋವಿಡ್-19 ಆಸ್ಪತ್ರೆಯಲ್ಲಿ ಇಂದು ನಸುಕಿನ ಜಾವ ಬೆಂಕಿ ಅವಘಡ ಉಂಟಾಗಿ ಐದು ಮಂದಿ ರೋಗಿಗಳು ಮೃತಪಟ್ಟಿದ್ದಾರೆ. ಆಸ್ಪತ್ರೆಯ ಕೋವಿಡ್-19 ರೋಗಿಗಳಿಗೆ ಮೀಸಲಾಗಿದ್ದ ತೀವ್ರ ನಿಗಾ ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದೆ. 

ಮೂಲಗಳಿಂದ ಸಿಕ್ಕಿರುವ ಪ್ರಕಾರ, ದುರ್ಘಟನೆ ನಡೆಯುವ ವೇಳೆ ಐಸಿಯುನಲ್ಲಿ ಸುಮಾರು 11 ಮಂದಿ ರೋಗಿಗಳಿದ್ದರು. 6 ಮಂದಿಯನ್ನು ರಕ್ಷಿಸಲಾಗಿದ್ದು ಉಳಿದ ಐವರು ಮೃತಪಟ್ಟಿದ್ದಾರೆ.

ಕೋವಿಡ್-19 ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 

ಘಟನೆ ನಡೆದ ತಕ್ಷಣ ರಾಜಕೋಟ್ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದು, ಎಲ್ಲಾ ರೋಗಿಗಳನ್ನು ಸದ್ಯ ಪಕ್ಕದ ಇನ್ನೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. 

ಇಲ್ಲಿ 33 ಕೋವಿಡ್-19 ರೋಗಿಗಳು ದಾಖಲಾಗಿದ್ದರು. ನಾವು ಘಟನೆ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣವೇ ಸ್ಥಳಕ್ಕೆ ಹೋಗಿ ಬೆಂಕಿ ನಂದಿಸಿದ್ದೇವೆ. 30 ರೋಗಿಗಳನ್ನು ರಕ್ಷಿಸಿದೆವು. ಮೂರು ರೋಗಿಗಳು ಐಸಿಯು ಒಳಗೆಯೇ ಮ-ತಪಟ್ಟಿದ್ದಾರೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿ ಜೆಬಿ ತೆವಸೈಡ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಪ್ರಧಾನಿ ಸಂತಾಪ: ರಾಜ್ ಕೋಟ್ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಐವರು ಮೃತಪಟ್ಟ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. 

ಆಸ್ಪತ್ರೆಯ ಆಡಳಿತ ಸಿಬ್ಬಂದಿ ಬೆಂಕಿ ಅವಘಡದಲ್ಲಿ ಸಿಲುಕಿ ಮೃತಪಟ್ಟವರ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ. 

ಘಟನೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ವಿಜಯ್ ರೂಪಾಣಿ ತನಿಖೆಗೆ ಆದೇಶಿಸಿದ್ದಾರೆ.ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
SCROLL FOR NEXT