ದೇಶ

ಕಂಗನಾ ಬಂಗಲೆ ನೆಲಸಮ ದುರುದ್ದೇಶದಿಂದ ಕೂಡಿದೆ: ಬಿಎಂಸಿಗೆ ಬಾಂಬೆ ಹೈಕೋರ್ಟ್ ತರಾಟೆ

Lingaraj Badiger

ಮುಂಬೈ: ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರು ತಮ್ಮ ಬಂಗಲೆಯನ್ನು ಕೆಡವಿದ ಬೃಹನ್‌ ಮುಂಬೈ ಮಹಾನಗರಪಾಲಿಕೆಯ(ಬಿಎಂಸಿ)ಯ ವಿರುದ್ಧದ ಕಾನೂನು ಹೋರಾಟದಲ್ಲಿ ಕೊನೆಗೂ ಗೆಲುವು ಸಾಧಿಸಿದ್ದು, ಕಟ್ಟಡ ನೆಲಸಮಕ್ಕೆ ಬಿಎಂಸಿ ನೀಡಿದ್ದ ನೋಟಿಸ್ ಅನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ಸೆಪ್ಟೆಂಬರ್‌ 9ರಂದು ಬಾಂದ್ರಾದಲ್ಲಿರುವ ಕಂಗನಾ ರನೌತ್‌ ಅವರ ಬಂಗಲೆಯ ಒಂದು ಭಾಗವನ್ನು ಬಿಎಂಸಿ ನೆಲಸಮಗೊಳಿಸಿತ್ತು. ಇದನ್ನು ಪ್ರಶ್ನಿಸಿ ನಟಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಜೆ.ಕಥಾವಾಲಾ ಮತ್ತು ಆರ್‌.ಐ.ಚಾಗ್ಲಾ ಅವರಿದ್ದ ಪೀಠ, ಕಟ್ಟಡ ಧ್ವಂಸ ಕ್ರಮ ದುರುದ್ದೇಶದಿಂದ ಕೂಡಿದೆ. ಇದರಿಂದ ಕಂಗನಾ ಅವರಿಗೆ ಗಣನೀಯ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಯಾವುದೇ ಪ್ರಜೆಯ ವಿರುದ್ಧ ‘ತೋಳ್ಭಲ’ ಪ್ರದರ್ಶಿಸುವುದನ್ನು ಸಮ್ಮತಿಸುವುದಿಲ್ಲ ಎಂದು ಎಚ್ಚರಿಸಿದೆ.

ಕಾನೂನು ಬಾಹಿರವಾಗಿ ಕಟ್ಟಡ ಕಟ್ಟಲಾಗಿದೆ ಎಂಬ ಆರೋಪದಡಿ(ಬಿಎಂಸಿ ಆಕ್ಟ್ 354A) ಕಂಗನಾ ಅವರ ಬಂಗಲೆಯನ್ನು ಕೆಡವಲಾಗಿತ್ತು. ಬಿಎಂಸಿ ಕಾರ್ಯಾಚರಣೆ ವಿರುದ್ಧ ಕಂಗನಾ, ನ್ಯಾಯಾಲಯದ ಮೊರೆಹೋಗಿದ್ದರು. ಬಿಎಂಸಿ ತಮಗೆ 2 ಕೋಟಿ ನಷ್ಟಪರಿಹಾರ ಕೊಡಬೇಕು ಮತ್ತು ಬಿಎಂಸಿ ಕ್ರಮ ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು.

SCROLL FOR NEXT