ದೇಶ

ಅಧಿಕಾರಕ್ಕೆ ಬಂದ ಕೂಡಲೇ ಮೂರು ರೈತ ವಿರೋಧಿ ಕಾನೂನುಗಳು ರದ್ದು: ಕಾಂಗ್ರೆಸ್‌

Lingaraj Badiger

ನವದೆಹಲಿ: ದೇಶಾದ್ಯಂತ ನಡೆಯತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕಾಂಗ್ರೆಸ್‌, ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೂರು ರೈತ-ವಿರೋಧಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಶುಕ್ರವಾರ ಭರವಸೆ ನೀಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಆದ್ಯತೆ ಮೇರೆಗೆ ಮೂರು ರೈತ-ವಿರೋಧಿ ನೀತಿಗಳನ್ನು ರದ್ದುಗೊಳಿಸುವುದಾಗಿ ತಿಳಿಸಿದರು.

ನಮ್ಮ ಪಕ್ಷ ಆರಂಭದಿಂದಲೂ ಅದನ್ನು ವಿರೋಧಿಸುತ್ತಿದೆ. ಈ ಕಾಯ್ದೆ ವಿರೋಧಿಸಿದ್ದಕ್ಕೆ ಕಾಂಗ್ರೆಸ್‌ ಸಂಸದರನ್ನು ಅಮಾನತಿನಲ್ಲಿ ಕೂಡ ಇಡಲಾಗಿತ್ತು ಎಂದರು.

ದೇಶದಲ್ಲಿ ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ, ಈ ಮೂರು ಕಾಯ್ದೆಗಳಿಂದ ರೈತರಿಗೆ ನಷ್ಟವಾಗುವುದನ್ನು ತಡೆಯಲು ರಾಜ್ಯ ಮಟ್ಟದಲ್ಲಿ ಹೊಸ ಕಾನೂನುಗಳನ್ನು ರಚಿಸಲಾಗುತ್ತಿದೆ ಎಂದು ಹೇಳಿದರು.

ರೈತರು ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಸೇರಿಲ್ಲ. ಅವರು ಎಲ್ಲರ ಹೊಟ್ಟೆ ತುಂಬಿಸಲು ಶ್ರಮ ಪಡುತ್ತಾರೆ. ಕೇಂದ್ರ ಸರ್ಕಾರ ಅವರ ಧ್ವನಿಯನ್ನು ಆಲಿಸಬೇಕು ಎಂದರು.

SCROLL FOR NEXT