ದೇಶ

ಕೋವಿಡ್ ಪರೀಕ್ಷೆ ತಪ್ಪಿಸಿಕೊಳ್ಳಲು ಕರ್ನಾಟಕದ ಮೂಲಕ ಮಹಾರಾಷ್ಟ್ರಕ್ಕೆ ತೆರಳುತ್ತಿರುವ ಗೋವಾ ಪ್ರವಾಸಿಗರು!

Srinivasamurthy VN

ಮಂಗಳೂರು: ಕಡ್ಡಾಯ ಕೋವಿಡ್-19 ಪರೀಕ್ಷೆಯನ್ನು ತಪ್ಪಿಸಿಕೊಳ್ಳಲು ಗೋವಾದ ಪ್ರವಾಸಿಗರು  ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಮಾರಕ ಕೊರೋನಾ ವೈರಸ್ ನ ಎರಡನೇ ಅಲೆ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವಂತೆಯೇ ಹಲವು ರಾಜ್ಯಗಳು ಕೋವಿಡ್ ನಿಯಮಗಳನ್ನು ಕಠಿಣಗೊಳಿಸಿವೆ. ಪ್ರಮುಖವಾಗಿ ಕೊರೋನಾ ವೈರಸ್ ನ ಎರಡನೇ ಅಲೆಯಲ್ಲಿ ತತ್ತರಿಸಿ ಹೋಗುತ್ತಿರುವ ದೆಹಲಿ, ರಾಜಸ್ಥಾನ, ಗುಜರಾತ್  ಮತ್ತು ಗೋವಾ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ಆಗಮಿಸುವ ಪ್ರವಾಸಿಗರು ಕಡ್ಡಾಯ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿಮಾನ, ರೈಲು ಮತ್ತು ಬಸ್ ನಿಲ್ದಾಣಗಳಿಗೆ ಆಗಮಿಸುವ ಪ್ರವಾಸಿಗರನ್ನು ಆರ್ ಟಿ ಪಿಸಿಆರ್ ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದ್ದು, ವರದಿ ನೆಗೆಟಿವ್  ಬಂದರೆ ಮಾತ್ರ ರಾಜ್ಯದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.

ಆದರೆ ಈ ನಿಯಮವನ್ನು ತಪ್ಪಿಸಿಕೊಳ್ಳಲು ಗೋವಾ ಮೂಲದ ಪ್ರವಾಸಿಗರು ಮೊದಲು ಕರ್ನಾಟಕಕ್ಕೆ ಆಗಮಿಸಿ ಬಳಿಕ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಾರೆ. ಗೋವಾ ಮೂಲದ ಹಲವು ಪ್ರವಾಸಿಗರು ಗೋವಾದಿಂದ ರಸ್ತೆ ಮಾರ್ಗವಾಗಿ ಕರ್ನಾಟಕದ ಬೆಳಗಾವಿಸ ಹುಬ್ಬಳ್ಳಿ, ಮಂಗಳೂರಿಗೆ  ಆಗಮಿಸಿ,  ಅಲ್ಲಿಂದ ವಿಮಾನ ಮಾರ್ಗವಾಗಿ ಮುಂಬೈ ಮತ್ತು ಮಹಾರಾಷ್ಟ್ರದ ಇತರೆ ಮಾರ್ಗಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇದರಿಂದ ಕಡ್ಡಾಯ ಕೋವಿಡ್ ಪರೀಕ್ಷೆ ತಪ್ಪಿಸಿಕೊಳ್ಳುವುದು ಅವರ ಹುನ್ನಾರವಾಗಿದೆ. 

ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಿಲ್ಲ. ಆದರೆ ಪಣಜಿ ಅಥವಾ ಗೋವಾದ ಇತರೆ ಭಾಗಗಳಿಂದ ಆಗಮಿಸುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ಇದೇ ಕಾರಣಕ್ಕೆ ಗೋವಾ ಪ್ರವಾಸಿಗರು ಕರ್ನಾಟಕ ಮಾರ್ಗವಾಗಿ  ಮಹಾರಾಷ್ಟ್ರ ಪ್ರವೇಶಿಸುತ್ತಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಕುಮಾರ್ ಠಾಕ್ರೆ ಅವರು, 'ತಮ್ಮ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಿದ ಪ್ರಯಾಣಿಕರ ಪ್ರಯಾಣದ ದಾಖಲೆಯ ಬಗ್ಗೆ ನಿಗಾ ಇಡುವುದಿಲ್ಲ. ಇತ್ತೀಚೆಗೆ ಮಹಾರಾಷ್ಟ್ರಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೆಯೇ  ಎಂದು ಪರಿಶೀಲಿಸಬೇಕಾಗಿದೆ ಎಂದು ಹೇಳಿದರು.  

ಇನ್ನು ಮುಂಬೈ ಮೂಲದ ಕುಟುಂಬವೊಂದು ಶನಿವಾರ ಮುಂಬೈ ವಿಮಾನ ಹತ್ತಲು ಓಲ್ಡ್ ಗೋವಾದಿಂದ ಮಂಗಳೂರಿಗೆ ತೆರಳಿದ್ದು, ಈ ಬಗ್ಗೆ ಮಾತನಾಡಿರುವ ಅವರು, ನಮಗೆ ಉಡುಪಿ ಮತ್ತು ಮಂಗಳೂರಿಗೆ ಭೇಟಿ ನೀಡುವ ಯಾವುದೇ ಯೋಜನೆ ಇರಲಿಲ್ಲ ಮತ್ತು ಗೋವಾದಿಂದ  ಹಿಂದಿರುಗಬೇಕಿತ್ತು. ‘ಅನಗತ್ಯ’ ಕೋವಿಡ್ ಪರೀಕ್ಷೆಯನ್ನು ತಪ್ಪಿಸಿಕೊಳ್ಳಲು ನಾವು ಮಂಗಳೂರಿನಿಂದ ವಿಮಾನ ಹತ್ತ ಬೇಕಾಯಿತು ಎಂದು ಹೇಳಿದ್ದಾರೆ.
 

SCROLL FOR NEXT