ದೇಶ

ಲಾಕ್‌ಡೌನ್ ಕಾರಣದಿಂದ ರದ್ದಾದ ವಿಮಾನಗಳ ಟಿಕೆಟ್‌ ಶುಲ್ಕ ಮರುಪಾವತಿಸಿ: ಸುಪ್ರೀಂ ಕೋರ್ಟ್ ಆದೇಶ

Lingaraj Badiger

ನವದೆಹಲಿ: ಲಾಕ್ ಡೌನ್ ಕಾರಣದಿಂದ ರದ್ದಾದ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್ ಶುಲ್ಕವನ್ನು ತಕ್ಷಣ ಮರುಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಕೋವಿಡ್-19 ಲಾಕ್ ಡೌನ್ ಪರಿಣಾಮ ಮಾರ್ಚ್ 25 ರಿಂದ ಮೇ 24 ರ ಅವಧಿಯಲ್ಲಿ ರದ್ದಾದ ವಿಮಾನಗಳ ಟಿಕೆಟ್ ಶುಲ್ಕವನ್ನು ಮರುಪಾವತಿಸಬೇಕು. ಲಾಕ್ ಡೌನ್ ಅವಧಿಯಲ್ಲಿ ಏಜೆಂಟ್ ಗಳ ಮೂಲಕ ಬುಕ್ ಟಿಕೆಟ್ ಬುಕ್ ಮಾಡಿದ್ದರೆ ವಿಮಾನಯಾನ ಸಂಸ್ಥೆಗಳು ಕೂಡಲೇ ಸಂಪೂರ್ಣ ಹಣವನ್ನು ಏಜೆಂಟ್ ಗಳಿಗೆ ಪಾವತಿಸಬೇಕು ಮತ್ತು ಏಜೆಂಟ್ ಸಹ ತಕ್ಷಣ ಪ್ರಯಾಣಿಕರಿಗೆ ಮರುಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಹಣಕಾಸಿನ ತೊಂದರೆಯಿಂದಾಗಿ ಯಾವುದೇ ವಿಮಾನಯಾನ ಸಂಸ್ಥೆಗಳು ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ ಅವರು ಪ್ರಯಾಣಿಕರಿಂದ ನೇರವಾಗಿ ಅಥವಾ ಟ್ರಾವೆಲ್ ಏಜೆಂಟ್ ಮೂಲಕ ಬುಕಿಂಗ್ ಮಾಡಿದ ಪ್ರಯಾಣಿಕರ ಹೆಸರಿನಲ್ಲಿ ಸಂಗ್ರಹಿಸಿದ ಶುಲ್ಕದ ಮೊತ್ತಕ್ಕೆ ಸಮನಾದ ಕ್ರೆಡಿಟ್ ಶೆಲ್ ಅನ್ನು ಒದಗಿಸಬೇಕು. ಅದು 2021, ಮಾರ್ಚ್ 31ರೊಳಗೆ ಅದನ್ನು ಉಪಯೋಗಿಸಿಕೊಳ್ಳಬಹುದು” ಎಂದು ಕೋರ್ಟ್ ಹೇಳಿದೆ.

ಕ್ರೆಡಿಟ್ ಶೆಲ್ ಅನ್ನು ಮಾರ್ಚ್ 31, 2021 ರವರೆಗೆ ಯಾವುದೇ ಮಾರ್ಗದಲ್ಲಿ ಬಳಸಿಕೊಳ್ಳಲು ಅಥವಾ ಕ್ರೆಡಿಟ್ ಶೆಲ್ ಅನ್ನು ಸಂಬಂಧಪಟ್ಟ ಟ್ರಾವೆಲ್ ಏಜೆಂಟ್ ಸೇರಿದಂತೆ ಯಾವುದೇ ವ್ಯಕ್ತಿಗೆ ವರ್ಗಾಯಿಸಲು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ ಮತ್ತು ವಿಮಾನಯಾನ ಸಂಸ್ಥೆಗಳು ಅಂತಹ ವರ್ಗಾವಣೆಯನ್ನು ಗೌರವಿಸುತ್ತವೆ ಎಂದು ಉನ್ನತ ನ್ಯಾಯಾಲಯ ತಿಳಿಸಿದೆ.

ರದ್ದಾದ ವಿಮಾನಗಳ ಟಿಕೆಟ್ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸುವಂತೆ ಕೋರಿ ಎನ್‌ಜಿಒಗಳು ಮತ್ತು ಪ್ರಯಾಣಿಕರ ಸಂಘ ಸೇರಿದಂತೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು.

SCROLL FOR NEXT