ದೇಶ

ಯುಪಿ ಪೊಲೀಸರ ‘ಅತ್ಯಾಚಾರ ನಡೆದಿಲ್ಲ’ ಹೇಳಿಕೆ ‘ಬೇಜವಾಬ್ದಾರಿತನದ್ದು’: ನಿವೃತ್ತ ಪೊಲೀಸ್ ಅಧಿಕಾರಿ, ವಿಧಿವಿಜ್ಞಾನ ತಜ್ಞರು

Lingaraj Badiger

ನವದೆಹಲಿ: ಹತ್ರಾಸ್ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬ ಉತ್ತರ ಪ್ರದೇಶ ಪೊಲೀಸರ ಹೇಳಿಕೆ ಅತ್ಯಂತ “ಬೇಜವಾಬ್ದಾರಿತನದ” ಮತ್ತು “ವೃತ್ತಿಪರವಲ್ಲದ” ಹಾಗೂ “ತಪ್ಪಾದ” ಹೇಳಿಕೆ ಎಂದು ನಿವೃತ್ತ ಉನ್ನತ ಪೊಲೀಸ್ ಅಧಿಕಾರಿ, ವಿಧಿವಿಜ್ಞಾನ ಮತ್ತು ಕಾನೂನು ತಜ್ಞರು ಹೇಳಿದ್ದಾರೆ.

ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲು ವಿಳಂಬ ಮಾಡಿದ್ದು ಏಕೆ? ಎಂದು ತಜ್ಞರು ಪ್ರಶ್ನಿಸಿದ್ದಾರೆ.

“ಸಾಮಾನ್ಯವಾಗಿ ಅತ್ಯಾಚಾರ ನಡೆದು 72 ಗಂಟೆಗಳ ನಂತರ ವೀರ್ಯವನ್ನು ಪಡೆಯುವುದು ಕಷ್ಟ. ಆದ್ದರಿಂದ 72 ಗಂಟೆಗಳ ಒಳಗೆ ಮಾದರಿಯನ್ನು ಪರೀಕ್ಷೆಗೆ ಕಳುಹಿಸುವುದು ಬಹಳ ಮುಖ್ಯ” ಎಂದು ಸರ್ಕಾರಿ ವಿಧಿವಿಜ್ಞಾನ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ 2013ರಲ್ಲಿ ಕಾನೂನಿನಲ್ಲಿ ಸುಧಾರಣೆಗಳನ್ನು ತರಲಾಗಿದ್ದು, ಅತ್ಯಾಚಾರ ಅಪರಾಧವನ್ನು ಸಾಬೀತುಪಡಿಸಲು ಸಂತ್ರಸ್ತೆಯಲ್ಲಿ ವೀರ್ಯ ಪತ್ತೆಯಾಗುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದ್ದರಿಂದ, ವೀರ್ಯ ಕಂಡುಬಂದಿಲ್ಲ ಎಂಬ ಕಾರಣದಿಂದಾಗಿ ಅತ್ಯಾಚಾರ ನಡೆದಿಲ್ಲ ಎಂದು ಹೇಳುವುದು ತಪ್ಪು ಎಂದು ಉತ್ತರ ಪ್ರದೇಶ ಮಾಜಿ ಪೊಲೀಸ್ ಮುಖ್ಯಸ್ಥ ವಿಕ್ರಮ್ ಸಿಂಗ್ ಹೇಳಿದ್ದಾರೆ.

ಡಿಜಿಟಲ್ ಅತ್ಯಾಚಾರದಂತಹ ಕೆಲವು ರೀತಿಯ ಅತ್ಯಾಚಾರಗಳಲ್ಲಿ ವೀರ್ಯವನ್ನು ಕಂಡುಹಿಡಿಯಲಾಗುವುದಿಲ್ಲ. ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿ ಪೊಲೀಸ್ ಇಲಾಖೆಯ ಪ್ರತಿಕ್ರಿಯೆ ಅತ್ಯಂತ "ಕಳಪೆ ಮತ್ತು ವೃತ್ತಿಪರವಲ್ಲದ" ಹೇಳಿಕೆ ಎಂದು ಅವರು ಟೀಕಿಸಿದ್ದಾರೆ.

ಯುಪಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅವರು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆಯನ್ನು ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಕಾನೂನಿನ ಪ್ರಕಾರ, ವೀರ್ಯ ಪತ್ತೆಯಾಗಿಲ್ಲ ಎಂಬ ಕಾರಣಕ್ಕೆ ಅತ್ಯಾಚಾರ ನಡೆದಿಲ್ಲ ಎಂದು ಹೇಳುವುದು ತಪ್ಪು. ಸಂತ್ರಸ್ತ ಯುವತಿ ಖಾಸಗಿ ಭಾಗಗಳಿಗೆ ಗಾಯಗಳಾಗಿವೆ ಎಂದು ನಮಗೆ ತಿಳಿದರೂ ಅತ್ಯಚಾರ ನಡೆದಿಲ್ಲ ಎಂಬ ತೀರ್ಮಾನಕ್ಕೆ ಬರಲು ಹೇಗೆ ಸಾಧ್ಯ? ಎಂದು ಮತ್ತೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಪ್ರಶ್ನಿಸಿದ್ದಾರೆ.

“ವಿಧಿವಿಜ್ಞಾನ ವರದಿಯಲ್ಲಿ ಯಾವುದೇ ವೀರ್ಯ ಕಂಡುಬಂದಿಲ್ಲ. ಹೀಗಾಗಿ ಸಂತ್ರಸ್ತೆಯ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ ಎಂದು ಎಫ್‌ಎಸ್‌ಎಲ್ ವರದಿ ಈಗಾಗಲೇ ಸ್ಪಷ್ಟಪಡಿಸಿದೆ. ಆದಾಗ್ಯೂ, ಸಂತ್ರಸ್ತೆ ಶವಪರೀಕ್ಷೆಯ ವರದಿಯು ಅವಳ ಖಾಸಗಿ ಭಾಗಗಳಲ್ಲಿ ಗಾಯಗಳಾಗಿರುವುದನ್ನು ಉಲ್ಲೇಖಿಸುತ್ತದೆ" ಎಂದು ಉತ್ತರ ಪ್ರದೇಶ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಹೇಳಿದ್ದರು.

SCROLL FOR NEXT