ದೇಶ

ಸಾಕಾಗಿದೆಯೇ ವರ್ಕ್ ಫ್ರಮ್ ಹೋಮ್? ಉತ್ತರಾಖಂಡ್ ನ ಪರ್ವತಗಳಲ್ಲಿ ಲಭ್ಯವಿದೆ 'ವರ್ಕೇಷನ್'‌ 

Srinivas Rao BV

ಡೆಹ್ರಾಡೂನ್: ವರ್ಕ್ ಫ್ರಮ್ ಹೋಮ್ ಪರಿಕಲ್ಪನೆಯನ್ನೂ ಮೀರಿ ಇತ್ತೀಚಿನ ದಿನಗಳಲ್ಲಿ ವರ್ಕೇಷನ್ ಎನ್ನುವ ಪರಿಕಲ್ಪನೆ ಪ್ರಬಲವಾಗಿ ಬೇರೂರುತ್ತಿದೆ. 

ಈ ನಡುವೆ ಕೊರೋನಾ ಹಿನ್ನೆಲೆಯಲ್ಲಿ ಬಹುತೇಕ ಸಂಸ್ಥೆಗಳ ಉದ್ಯೋಗಿಗಳು ಕಳೆದ 6-8 ತಿಂಗಳಿನಿಂದ ಮನೆಯಿಂದಲೇ ಕೆಲಸ ಮಾಡಿ ಬೇಸತ್ತಿದ್ದಾರೆ. 

ಮನೆಯಲ್ಲಿ ಇದ್ದುಕೊಂಡು ಮಾಡುವ ಕೆಲಸವನ್ನು ಪ್ರವಾಸಿತಾಣಗಳಲ್ಲಿ ಒಂದಿಷ್ಟು ದಿನ ಉಳಿದುಕೊಂಡು ನಿರ್ವಹಿಸುವುದಕ್ಕೆ 'ವರ್ಕೇಷನ್‌' ಎನ್ನಲಾಗುತ್ತದೆ. ಈ ಪರಿಕಲ್ಪನೆ ಕೊಡಗು ಸೇರಿದಂತೆ ಅನೇಕ ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕೆ ಬಳಸಿಕೊಳ್ಳಲಾಗುತ್ತಿದ್ದು ಉತ್ತರಾಖಂಡ್ ಸರ್ಕಾರವೂ ಈ ಸಾಲಿಗೆ ಸೇರ್ಪಡೆಯಾಗಿದೆ. 

ಉತ್ತರಾಖಂಡ್ ಟೂರಿಸಮ್ ಸಾಮಾಜಿಕವಾಗಿ ಅಂತರ ಹೊಂದಿರುವ ಪ್ರದೇಶಗಳಲ್ಲಿ ವರ್ಕೇಷನ್‌ ನ್ನು ಉತ್ತೇಜಿಸಲು ಮುಂದಾಗಿದ್ದು, ಎತ್ತರದ ಬೆಟ್ಟಗಳು, ತಂಪಾದ ಹವಾಮಾನ, ಹಚ್ಚ ಹಸಿರಿನ ನಡುವೆ ಇರುವ ಹೋಂಸ್ಟೇಗಳಿರುವ ಪ್ರದೇಶಗಳನ್ನು ಪಟ್ಟಿ ಮಾಡಿದೆ. 

ಜಿಮ್ ಕಾರ್ಬೆಟ್, ಲ್ಯಾನ್ಸ್‌ಡೌನ್, ಮಸ್ಸೂರಿ, ಕೌಸಾನಿ, ಡೆಹ್ರಾಡೂನ್, ನೈನಿತಾಲ್, ಅಲ್ಮೋರಾಗಳಲ್ಲಿ ವರ್ಕೇಷನ್ ನ್ನು ಉತ್ತರಾಖಂಡ್ ಸರ್ಕಾರ ಉತ್ತೇಜಿಸುತ್ತಿದೆ. 

ಗ್ರಾಹಕರ ಅಗತ್ಯತೆ, ಬೇಡಿಕೆಗೆ ತಕ್ಕಂತೆ ವರ್ಕೇಷನ್ ಪ್ಯಾಕೇಜ್ ಗಳನ್ನು ನೀಡಲಾಗುತ್ತಿದೆ ಎಂದು ಉತ್ತರಾಖಂಡ್ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ದಿಲೀಪ್ ಜವಾಲ್ಕರ್ ತಿಳಿಸಿದ್ದಾರೆ. ವರ್ಕೇಷನ್ ಸೌಲಭ್ಯ ಪಡೆದುಕೊಳ್ಳುವ ಗ್ರಾಹಕರಿಗೆ ಚಾರಣ, ಬೈಕಿಂಗ್, ಪಕ್ಷಿ ವೀಕ್ಷಣೆ, ಸ್ಟಾರ್‌ಗ್ಯಾಸಿಂಗ್ ಸೇರಿದಂತೆ ಆಕರ್ಷಕ ಕೊಡುಗೆಗಳನ್ನೂ ಉತ್ತರಾಖಂಡ್ ಸರ್ಕಾರ ನೀಡುತ್ತಿದೆ. 

ಉತ್ತರಾಖಂಡ್ ಗೆ ಕನಿಷ್ಟ 3 ದಿನಗಳ ಭೇಟಿ ನೀಡುವ ಪ್ರವಾಸಿಗರಿಗೆ ಹೊಟೇಲ್/ಹೋಮ್ ಸ್ಟೇ ಗಳನ್ನು ಬುಕ್ ಮಾಡುವ ದರದಲ್ಲಿ 3000 ವರೆಗೆ ರಿಯಾಯಿತಿ ನೀಡುವ ಟೂರಿಸ್ಟ್ ಇನ್ಸೆಂಟೀವ್ ಕೂಪನ್ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುತ್ತದೆ ಎಂದು ಕಾರ್ಯದರ್ಶಿಗಳು ತಿಳಿಸಿದ್ದಾರೆ. 

SCROLL FOR NEXT