ದೇಶ

ಮಧ್ಯ ಪ್ರದೇಶ: ಕೇಸು ದಾಖಲಿಸದ ಪೊಲೀಸರ ವರ್ತನೆಯಿಂದ ಬೇಸತ್ತು ಅತ್ಯಾಚಾರಕ್ಕೊಳಗಾದ ಮಹಿಳೆ ಆತ್ಮಹತ್ಯೆ

Sumana Upadhyaya

ಭೋಪಾಲ್: ನಾಲ್ಕು ದಿನಗಳ ಹಿಂದೆ ಮೂವರು ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದ 33 ವರ್ಷದ ದಲಿತ ಮಹಿಳೆ ಮಧ್ಯ ಪ್ರದೇಶದ ನರ್ಸಿಂಗ್ ಪುರ್ ಜಿಲ್ಲೆಯ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೂರು ದಿನಗಳ ಹಿಂದೆ ಪ್ರಕರಣವನ್ನು ಸ್ಥಳೀಯ ಪೊಲೀಸರ ಗಮನಕ್ಕೆ ಮನೆಯವರು ತಂದಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿದ್ದರಿಂದ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ತೀವ್ರ ನೊಂದಿದ್ದಳು. ಆರೋಪಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಳ್ಳುವ ಬದಲು ಪೊಲೀಸರು ಆಕೆಯ ಪತಿ ಮತ್ತು ಮನೆಯವರು ಪೊಲೀಸ್ ಠಾಣೆ ಬಳಿ ದಿನವಿಡೀ ಕಾದು ಕುಳ್ಳಿರಿಸಿ ಮರುದಿನ ಮನೆಗೆ ಕಳುಹಿಸಿದ್ದರು, ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸುತ್ತಾರೆ.

ನಿನ್ನೆ ಅದೇ ಗ್ರಾಮದ ಮತ್ತೊಬ್ಬ ಮಹಿಳೆ ಲೀಲಾ ಬಾಯಿ ಎಂಬುವವಳು ಅತ್ಯಾಚಾರಕ್ಕೀಡಾದ ಮಹಿಳೆ ಗ್ರಾಮದ ನಳ್ಳಿಯಿಂದ ನೀರು ಹಿಡಿಯಲು ಹೋಗಿದ್ದಾಗ ನಿಂದಿಸಿದ್ದಳಂತೆ. ಮತ್ತೊಬ್ಬ ಮಹಿಳೆಯ ನಿಂದನೆ ಮತ್ತು ಪೊಲೀಸರ ತಿರಸ್ಕಾರದಿಂದ ತೀವ್ರ ನೊಂದು ಮಹಿಳೆ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮನೆಯವರು ಹೇಳುತ್ತಾರೆ.

ಕೊನೆಗೆ ಆತ್ಮಹತ್ಯೆ ಘಟನೆ ಬಳಿಕ ನಿನ್ನೆ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ಕೇಸು ದಾಖಲಿಸಿಕೊಂಡಿದ್ದಾರೆ, ಅವರಲ್ಲಿ ಇಬ್ಬರು ಆರೋಪಿಗಳು ಮಹಿಳೆಯ ಜಾತಿಯವರೇ ಆಗಿದ್ದಾರೆ, ಮೂವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಘಟನೆ ಸಂಬಂಧ ಸಕಾಲಕ್ಕೆ ಕೇಸು ದಾಖಲಿಸದೆ ಕರ್ತವ್ಯಕ್ಕೆ ಚ್ಯುತಿ ತಂದ ಹಿನ್ನೆಲೆಯಲ್ಲಿ ನರಸಿಂಗ್ ಪುರ್ ಪೊಲೀಸ್ ಠಾಣೆಯ ಪೊಲೀಸ್ ಸಹಾಯಕ ಸಬ್ ಇನ್ಸ್ ಪೆಕ್ಟರ್ ಮಿಶ್ರಿಲಾಲ್ ಕೊಡಪ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕೇಸು ದಾಖಲಿಸಲಾಗಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಅಜಯ್ ಸಿಂಗ್ ತಿಳಿಸಿದ್ದಾರೆ.

SCROLL FOR NEXT