ದೇಶ

ಹತ್ರಾಸ್‌ನಲ್ಲಿ ಪೊಲೀಸರೊಂದಿಗೆ ಎಸ್‌ಪಿ, ಆರ್‌ಎಲ್‌ಡಿ, ಭೀಮ್ ಸೇನೆ ಕಾರ್ಯಕರ್ತರ ಘರ್ಷಣೆ

Nagaraja AB

ಹತ್ರಾಸ್: ಸಾಮೂಹಿಕ ಅತ್ಯಾಚಾರದಿಂದ ಮೃತಪಟ್ಟಿದ್ದಾಳೆ ಎನ್ನಲಾದ 19 ವರ್ಷದ ದಲಿತ ಹುಡುಗಿಯ ಸ್ವಂತ ಊರಾದ ಹತ್ರಾಸ್ ನ ಬಲ್ಗರಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸರೊಂದಿಗೆ ಘರ್ಷಣೆಗೆ ಇಳಿದ ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕ ದಳ ಮತ್ತು ಭೀಮ್ ಸೇನೆಯ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. 

ಒಂದೇ ಸಮಯದಲ್ಲಿ ಐದಕ್ಕೂ ಹೆಚ್ಚು ಜನರು ಊರಿನೊಳಗೆ ಪ್ರವೇಶಿಸಲು ಅವಕಾಶವಿಲ್ಲ ಎಂದು ಪೊಲೀಸರು ರಾಜಕೀಯ ಪಕ್ಷಗಳ ನಿಯೋಗಗಳಿಗೆ ಪ್ರವೇಶ  ನಿರಾಕರಿಸಿದಾಗ ಘರ್ಷಣೆಗಳು ನಡೆದಿವೆ.

ಎಸ್ ಪಿ ಮತ್ತು ಆರ್ ಎಲ್ ಡಿ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದು, ತಡೆಯನ್ನು ಮುರಿಯಲು ಯತ್ನಿಸಿದ್ದಾರೆ. ಇವರೊಂದಿಗೆ ಭೀಮ್ ಸೇನೆ ಕಾರ್ಯಕರ್ತರೂ ಜತೆಗೂಡಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದಾಗ ಘರ್ಷಣೆಗಳು ಆರಂಭವಾಗಿವೆ.

ಈ ವೇಳೆ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಕೇಂದ್ರದ ಮಾಜಿ ಸಚಿವ ಅಜಿತ್ ಸಿಂಗ್ ಅವರ ಪುತ್ರ ಆರ್ ಎಲ್ ಡಿ ನಾಯಕ ಜಯಂತ್ ಚೌಧರಿ ಸೇರಿದಂತೆ ಅನೇಕರು ಲಾಠಿ ಪ್ರಹಾರಕ್ಕೆ ಒಳಗಾಗಿದ್ದಾರೆ. ಕಲ್ಲು ತೂರಾಟದಲ್ಲಿ ಡಿಎಸ್ ಪಿ ಆನಂದ್ ಕುಮಾರ್ ಸೇರಿದಂತೆ ಕೆಲ ಪೊಲೀಸರು ಗಾಯಗೊಂಡಿದ್ದಾರೆ.

ಈ ಪ್ರದೇಶದಲ್ಲಿ ಭದ್ರತೆ ಬಲಪಡಿಸಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ನಂತರ, ಎಸ್ ಪಿ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ನೇತೃತ್ವದ 5 ಸದಸ್ಯರ ಪಕ್ಷದ ನಿಯೋಗ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿತು.ಆ ನಂತರ, ತರುವಾಯ, ಜಯಂತ್ ಚೌಧರಿ ನೇತೃತ್ವದ ಆರ್ ಎಲ್ ಡಿಯ ಮತ್ತೊಂದು ನಿಯೋಗ ಕುಟುಂಬ ಸದಸ್ಯರನ್ನು ಭೇಟಿ ಮಾಡಿತು.

ಈ ಘಟನೆಗಳಿಗೆ ಯೋಗಿ ಆದಿತ್ಯನಾಥ್ ಸರ್ಕಾರವೇ ಹೊಣೆ ಎಂದಿರುವ ಎರಡೂ ನಾಯಕರು, ನೈತಿಕ ಹೊಣೆ ಹೊತ್ತು ಆದಿತ್ಯನಾಥ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಎಸ್ ಪಿಯನ್ನು ಅಮಾನತುಗೊಳಿಸಿದಾಗ ಜಿಲ್ಲಾಧಿಕಾರಿಗಳನ್ನು ಏಕೆ ಅಮಾನತುಗೊಳಿಸಿಲ್ಲ ಎಂಬ ಪ್ರಶ್ನೆಯನ್ನೂ ವಿರೋಧ ಪಕ್ಷದ ನಾಯಕರು ಎತ್ತಿದ್ದಾರೆ.  

SCROLL FOR NEXT