ದೇಶ

ಜಮ್ಮು ಮತ್ತು ಕಾಶ್ಮೀರ: ಪ್ರತ್ಯೇಕ ಸೇನಾ ಎನ್ಕೌಂಟರ್ ನಲ್ಲಿ ನಾಲ್ಕು ಉಗ್ರರು ಹತ

Srinivasamurthy VN

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ನಡೆದ ಪ್ರತ್ಯೇಕ ಎನ್ಕೌಂಟರ್ ಗಳಲ್ಲಿ ನಾಲ್ಕು ಮಂದಿ ಉಗ್ರರನ್ನು ಸೇನಾಪಡೆಗಳು ಹೊಡೆದುರುಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಮತ್ತು ಪುಲ್ವಾಮದಲ್ಲಿ ಉಗ್ರರ ವಿರುದ್ಧ ಸೇನಾಪಡೆಗಳು ಎನ್ಕೌಂಟರ್ ನಡೆಸಿದ್ದು, ಈ ಎರಡೂ ಎನ್ ಕೌಂಟರ್ ನಲ್ಲಿ 4 ಮಂದಿ ಉಗ್ರರು ಹತರಾಗಿದ್ದಾರೆ. 

ಕುಲ್ಗಾಮ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಉಗ್ರರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದ ಜಮ್ಮು ಕಾಶ್ಮೀರ ಪೊಲೀಸರ ತಂಡ ಮತ್ತು ಸೇನಾಪಡೆ ಜಂಟಿ ಕಾರ್ಯಾಚರಣೆ ನಡೆಸಿತು. ಕುಲ್ಗಾಮ್ ಜಿಲ್ಲೆಯ ಚಿಂಗಾಮ್ ನಲ್ಲಿ ಉಗ್ರರು ಅಡಗಿರುವ ಬಗ್ಗೆ  ಸ್ಪಷ್ಟ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ಸ್ಥಳವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿದರು. ಭದ್ರತಾ ಸಿಬ್ಬಂದಿ ಸುತ್ತುವರಿಯುತ್ತಿದ್ದಂತೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದಾರೆ. ಇದಕ್ಕೆ ಸೇನೆಯೂ ಪ್ರತಿ ಉತ್ತರ ನೀಡಿದೆ. ಎನ್ ಕೌಂಟರ್ ಮುಂದುವರಿದಿದ್ದು, ಇದುವರೆಗೆ ಇಬ್ಬರು ಉಗ್ರರನ್ನು  ಹೊಡೆದುರುಳಿಸಲಾಗಿದೆ. 

ಮೃತರನ್ನು  ಜಂಗಲ್ಪೋರಾ ದಿವ್ಸರ್ ಕುಲ್ಗಂನ ನಿವಾಸಿಗಳಾದ ತಾರಿಕ್ ಅಹ್ಮದ್ ಮಿರ್ ಮತ್ತು ಪಾಕಿಸ್ತಾನದ ಪಂಜಾಬ್ ನಿವಾಸಿ ಸಮೀರ್ ಭಾಯ್ ಅಲಿಯಾಸ್ ಉಸ್ಮಾನ್ ಎಂದು ಗುರುತಿಸಲಾಗಿದೆ. ಮೃತ ಉಗ್ರರು ಜೈಶ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ. ಮೃತ ಉಗ್ರರು ಕಣಿವೆ ರಾಜ್ಯದಲ್ಲಿ  ಹಲವು ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಫರಾಹ್ ಮಿರ್ ಬಜಾರ್‌ನಲ್ಲಿ ಪೊಲೀಸ್ ಅಧಿಕಾರಿ ಖುರ್ಷಿದ್ ಅಹ್ಮದ್‌ ರ ಹತ್ಯೆ ಮತ್ತು ಅಖ್ರಾನ್ ಮಿರ್ಬಜಾರ್‌ನಲ್ಲಿ ಪಂಚಾಯಿತಿ ಮುಖ್ಯಸ್ಥ ಆರಿಫ್ ಅಹ್ಮದ್ ಮೇಲೆ ಗಂಭೀರ ಹಲ್ಲೆ ಸೇರಿದಂತೆ ಹಲವು ಕೃತ್ಯಗಳಲ್ಲಿ ಉಗ್ರರು ಭಾಗಿಯಾಗಿದ್ದರು.

ಇನ್ನು ಪುಲ್ವಾಮದ ದಡೂರ ಪ್ರಾಂತ್ಯದಲ್ಲೂ ಸೇನೆ ಎನ್ಕೌಂಟರ್ ನಡೆಸಿದ್ದು ಇಲ್ಲಿಯೂ ಇಬ್ಬರು ಉಗ್ರರು ಹತರಾಗಿದ್ದಾರೆ. ಉಗ್ರರ ಇರುವಿಕೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳವನ್ನು ಸುತ್ತುವರೆದಿದ್ದರು. ಈ ವೇಳೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಸೇನೆ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ  ಮಾಡಿದೆ. ಪ್ರಸ್ತುತ ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಸಾಗಿದೆ ಎಂದು ತಿಳಿದುಬಂದಿದೆ.

SCROLL FOR NEXT