ದೇಶ

ಕಾಶ್ಮೀರಕ್ಕೆ ಶಸ್ತ್ರಾಸ್ತ್ರ ನುಗ್ಗಿಸುವ ಪಾಕ್ ಪ್ರಯತ್ನ ಸೇನೆಯಿಂದ ವಿಫಲ; ಶಸ್ತ್ರಾಸ್ತ್ರ ವಶ

Manjula VN

ಶ್ರೀನಗರ: ಪಾಕಿಸ್ತಾನ ಆಕ್ರಮಿತ-ಕಾಶ್ಮೀರ (ಪಿಒಕೆ) ಯಿಂದ ಕುಪ್ವಾರಾ ಜಿಲ್ಲೆಯ ಕೆರನ್​ ಸೆಕ್ಟರ್ ನಲ್ಲಿ ಕಾಶ್ಮೀರ ಕಣಿವೆಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ತಳ್ಳುವ ಪಾಕಿಸ್ತಾನ ಯತ್ನವನ್ನು ಸೇನೆ ವಿಫಲಗೊಳಿಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಶನಿವಾರ ಬೆಳಿಗ್ಗೆ ತಿಳಿಸಿದ್ದಾರೆ.

ಕೇರನ್ ಸೆಕ್ಟರ್‌ನ ಕಿಶೆನ್​ಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ ಹಗ್ಗಕ್ಕೆ ಟ್ಯೂಬ್‌ ಕಟ್ಟಿ ಅದರ ಮೂಲಕ ಮೂವರು ಉಗ್ರರು ಶಸ್ತ್ರಾಸ್ತ್ರ ಸಾಗಿಸುತ್ತಿರುವುದನ್ನು ಗಡಿ ನಿಯಂತ್ರಣಾ ರೇಖೆಯನ್ನು ಕಾಯುತ್ತಿದ್ದ ಪಡೆಗಳು ಗಮನಿಸಿವೆ.

ಸೈನಿಕರು ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ನಡೆಸಿದಾಗ ನಾಲ್ಕು ಎಕೆ 74 ರೈಫಲ್ಸ್, ಎಂಟು ಮ್ಯಾಗಜೀನ್​ಗಳು ಮತ್ತು 240 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ. ಈ ಮೂಲಕ ತ್ವರಿತ ಕ್ರಮದಿಂದಾಗಿ ಸೇನೆ ಪಾಕ್ ನ ಯತ್ನವನ್ನು ವಿಫಲಗೊಳಿಸಿದೆ ಎಂದು ಅವರು ಹೇಳಿದ್ದಾರೆ.

ಬಳಿಕ ಇಡೀ ಅರಣ್ಯ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಆದರೆ, ಉಗ್ರರ ಸುಳಿವು ದೊರೆತಿಲ್ಲ ಎಂದು ಅವರು ಹೇಳಿದ್ದಾರೆ.

ಹಿಮಪಾತದಿಂದಾಗಿ ಒಳನುಸುಳುವಿಕೆ ಮಾರ್ಗಗಳು ಮುಚ್ಚುವ ಮೊದಲೇ ಉಗ್ರರಿಗೆ ಅನುಕೂಲವಾಗುವಂತೆ ಪಾಕಿಸ್ತಾನ ಪಡೆಗಳು ಶುಕ್ರವಾರ ಬರಾಮ್‌ಲ್ಲಾದ ಉರಿ ಸೆಕ್ಟರ್‌ನ ಕಮಲ್‌ಕೋಟ್​ ಮತ್ತು ಕುಪ್ವಾರಾದ ನೌಗಮ್ ಸೆಕ್ಟರ್‌ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿವೆ.

ಆದರೂ, ಉಗ್ರ ಯಾವುದೇ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲು ಸೇನೆ ತೀವ್ರ ಎಚ್ಚರಿಕೆ ವಹಿಸಿದೆ.

SCROLL FOR NEXT