ದೇಶ

ಭಾರತೀಯ ಮುಸ್ಲಿಮರು ಪ್ರಪಂಚದಲ್ಲಿಯೇ ಅತ್ಯಂತ ತೃಪ್ತರು: ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್

Sumana Upadhyaya

ನವದೆಹಲಿ: ಭಾರತೀಯ ಮುಸಲ್ಮಾನರು ವಿಶ್ವದಲ್ಲಿಯೇ ಅತ್ಯಂತ ತೃಪ್ತರಾಗಿದ್ದು, ಅಗತ್ಯ ಬಂದಾಗ ಎಲ್ಲಾ ಧರ್ಮದ ಜನರು ಇಲ್ಲಿ ಒಟ್ಟಾಗಿ ನಿಲ್ಲುತ್ತಾರೆ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ತಮ್ಮ ಸ್ವಹಿತಾಸಕ್ತಿಗೆ ಧಕ್ಕೆಯುಂಟಾಗುತ್ತದೆ ಎಂದು ಭಾವಿಸಿದವರು ಮಾತ್ರ ಭಾರತದಲ್ಲಿ ಯಾವುದೇ ರೀತಿಯ ಧರ್ಮಾಂಧತೆ ಮತ್ತು ಪ್ರತ್ಯೇಕತಾವಾದವನ್ನು ಹರಡುತ್ತಿದ್ದಾರೆ ಹೊರತು ಬೇರೆ ಸಂದರ್ಭಗಳಲ್ಲಿ ಇಲ್ಲಿ ಎಲ್ಲಾ ಧರ್ಮ, ಮತಗಳ ಜನರು ಒಗ್ಗಟ್ಟಿನಿಂದ ನೆಲೆಸಿದ್ದಾರೆ ಎಂದು ಹೇಳಿದ್ದಾರೆ.

ದೇಶದ ಕಲೆ, ಸಂಸ್ಕೃತಿ ಮೇಲೆ ದಾಳಿಯಾದ ಸಂದರ್ಭಗಳಲ್ಲಿ ಎಲ್ಲಾ ಧರ್ಮ, ನಂಬಿಕೆಯ ಜನರು ಇಲ್ಲಿ ಒಗ್ಗಟ್ಟಾಗಿ ನಿಂತಿದ್ದಾರೆ ಎಂದ ಮೋಹನ್ ಭಾಗವತ್, ಮೇವರ್ ನ ಮಹಾರಾಣ ಪ್ರತಾಪ ಸೇನೆಯ ಪರ ಮುಸ್ಲಿಮರು ಮೊಘಲ್ ದೊರೆ ಅಕ್ಬರ್ ವಿರುದ್ಧ ಸೆಣಸಾಡಿದ್ದರು ಎಂದಿದ್ದಾರೆ.

ಅತ್ಯಂತ ತೃಪ್ತಿಯಿಂದ ಮುಸ್ಲಿಮರು ಜೀವನ ನಡೆಸುತ್ತಿದ್ದರೆ ಅದು ಭಾರತದಲ್ಲಿ ಮಾತ್ರ, ಪ್ರಪಂಚದ ಯಾವುದೇ ದೇಶವನ್ನು ತೆಗೆದುಕೊಳ್ಳಿ, ವಿದೇಶಿ ಧರ್ಮ ಆಚರಿಸುವ ಜನರು ಅದೇ ದೇಶದಲ್ಲಿ ಇನ್ನೂ ಬದುಕುತ್ತಿದ್ದಾರೆ ಎಂದರೆ ಅದು ಕೂಡ ಭಾರತದಲ್ಲಿ ಮಾತ್ರ ಎಂದು ಮಹಾರಾಷ್ಟ್ರದ ಹಿಂದಿ ಮ್ಯಾಗಜೀನ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾಗವತ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಬೇರೆ ಧರ್ಮಗಳನ್ನು ಆಚರಿಸುವ ಜನರಿಗೆ ಹಕ್ಕು ಇಲ್ಲ, ಅಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ದೇಶ ನಿರ್ಮಿಸಲಾಗಿದೆ. ಭಾರತದ ಸಂವಿಧಾನದಲ್ಲಿ ಇಲ್ಲಿ ಹಿಂದೂಗಳು ಮಾತ್ರ ನೆಲೆಸಬಹುದು, ಜೀವನ ಮಾಡಬಹುದು, ಇಲ್ಲಿ ಹಿಂದೂಗಳು ಶ್ರೇಷ್ಠರು ಹೇಳಿಕೊಂಡು ಜೀವನ ಮಾಡಬೇಕು ಎಂದು ಯಾವತ್ತೂ ಹೇಳಿಲ್ಲ, ಇದು ನಮ್ಮ ದೇಶದ ಸಂಸ್ಕೃತಿ, ಸ್ವಭಾವ, ಆ ಮೂಲಗುಣ ಇರುವವರು ಹಿಂದೂಗಳು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ವ್ಯಕ್ತಿಪೂಜೆ ಮೇಲೆ ಹಿಂದೂಗಳಿಗೆ ನಂಬಿಕೆಯಿಲ್ಲ. ಒಂದು ಎಳೆ ನೂಲಿನಲ್ಲಿ ಜನರನ್ನು ಬೆಸೆಯುವ, ಮೇಲೆತ್ತುವ, ಎಲ್ಲರನ್ನೂ ಒಟ್ಟು ಸೇರಿಸುವ ಕೊಂಡಿಯೇ ಧರ್ಮ ಎಂದು ಭಾಗವತ್ ಧರ್ಮವನ್ನು ಬಣ್ಣಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಗ್ಗೆ ಮಾತನಾಡಿದ ಭಾಗವತ್, ಅಯೋಧ್ಯೆ ಕೇವಲ ಸಂಪ್ರದಾಯ ಆಚರಣೆಗೆ ಇರುವ ದೇವಸ್ಥಾನವೆಂಬ ಗುರುತು ಮಾತ್ರವಲ್ಲ, ರಾಷ್ಟ್ರದ ಮೌಲ್ಯ ಮತ್ತು ಗುಣದ ಹೆಗ್ಗುರುತು ಎಂದು ಬಣ್ಣಿಸಿದ್ದಾರೆ.

SCROLL FOR NEXT