ದೇಶ

ಭಾರತದ ಮುಸ್ಲಿಮರು ಜ್ಞಾನವಂತರು, ಸ್ವಾತಂತ್ರ್ಯ ಹೋರಾಟದಲ್ಲೂ ತ್ಯಾಗ ಮಾಡಿದ್ದಾರೆ: ಮೋಹನ್‌ ಭಾಗವತ್‌

Srinivasamurthy VN

ಮುಂಬೈ: ಭಾರತದ ಮುಸ್ಲಿಮರು ಜ್ಞಾನವಂತರು, ಸ್ವಾತಂತ್ರ್ಯ ಹೋರಾಟದಲ್ಲೂ ತ್ಯಾಗ ಮಾಡಿದ್ದಾರೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಮಹಾರಾಷ್ಟ್ರದ ‘ವಿವೇಕ್’ ಎಂಬ ಹಿಂದಿ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮೋಹನ್ ಭಾಗವತ್ ಮುಸ್ಲಿಮರನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದ್ದಾರೆ. ದೇಶದಲ್ಲಿ ಮುಸ್ಲಿಮರು ಹೆಚ್ಚು ಸುರಕ್ಷಿತ, ಸಂತೋಷವಾಗಿದ್ದಾರೆ. ಭಾರತೀಯ ಸಂಸ್ಕೃತಿಯ ಮೇಲೆ ದಾಳಿ ನಡೆದಾಗಲೆಲ್ಲ ಎಲ್ಲ ಧರ್ಮದ ಜನರು ಒಟ್ಟಾಗಿ  ನಿಂತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿಕೊಳ್ಳುತ್ತಿರುವುದು ಹೆಚ್ಚಿನ ಸಂತೋಷ ತಂದಿದೆ. ಹಿಂದೂಗಳು ಮಾತ್ರ ಭಾರತ ದೇಶದಲ್ಲಿ ಇರಬೇಕು ಎಂದು ನಮ್ಮ ಸಂವಿಧಾನ ಎಲ್ಲಿಯೂ ಹೇಳಿಲ್ಲ. ಆದರೆ ಇಲ್ಲಿ ಇರಬೇಕಾದರೆ ಹಿಂದೂಗಳ ಪ್ರಾಬಲ್ಯವನ್ನು ಒಪ್ಪಿಕೊಳ್ಳಬೇಕು ಎಂದು ಅವರು ಪರೋಕ್ಷವಾಗಿ  ಮುಸ್ಲಿಮರನ್ನು ಉದ್ದೇಶಿಸಿ ಹೇಳಿದ್ದಾರೆ.

ತಮ್ಮ ಸ್ವಾರ್ಥ ಸಾಧನೆಗಾಗಿ ಮನುಷ್ಯರ ನಡುವೆ ಗೋಡೆ ನಿರ್ಮಿಸಿ ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿದ್ದಾರೆ ಎಂದೂ, ಭಾರತದಲ್ಲಿ ಮುಸ್ಲಿಮರಿಗೂ ವಿಶೇಷ ಸ್ಥಾನಮಾನ ಹಾಗೂ ಘನತೆ ಕಲ್ಪಿಸಲಾಗಿದೆ ಎಂದು ಹೇಳಿದರು. ಮೊಘಲ್ ಚಕ್ರವರ್ತಿಯ ವಿರುದ್ಧದ ಹೋರಾಟದಲ್ಲಿ ಅನೇಕ ಮುಸ್ಲಿಂ ಯೋಧರು  ಮಹಾರಾಣಾ ಪ್ರತಾಪ್ ಅವರಿಗೆ ಸಹಾಯ ಮಾಡಿದ್ದನ್ನು ಈ ಸಂದರ್ಭದಲ್ಲಿ ಭಾಗವತ್ ಉಲ್ಲೇಖಿಸಿದ್ದಾರೆ. ಪ್ರಪಂಚದ ಬೇರೆ ಯಾವುದೇ ದೇಶಗಳಿಗಿಂತ ಭಾರತದಲ್ಲಿ ಮುಸ್ಲಿಮರು ಅತ್ಯಂತ ಸಂತೋಷವಾಗಿರುವುದನ್ನು ಯಾರೂ ಮರೆಯಬಾರದು. ನಮ್ಮ ನೆರೆಯ ಪಾಕಿಸ್ತಾನದಲ್ಲಿ ಅನ್ಯ ಧರ್ಮದ ಜನರಿಗೆ ಯಾವುದೇ  ಹಕ್ಕುಗಳಿಲ್ಲ. ಆದರೆ ಭಾರತ ಆ ರೀತಿಯಿಲ್ಲ ಎಲ್ಲ ಧರ್ಮದ ಜನರಿಗೆ ಹಕ್ಕುಗಳನ್ನು ಕಲ್ಪಿಸಿದ್ದು ಅವರು ತುಂಬಾ ಸಂತೋಷದಿಂದಿದ್ದಾರೆ ಎಂದರು.

ಅಯೋಧ್ಯೆಯ ರಾಮ ದೇವಾಲಯ ಕುರಿತು ಮಾತನಾಡಿದ ಭಾಗವತ್, ರಾಮ ಮಂದಿರ ರಾಷ್ಟ್ರೀಯ ಮೌಲ್ಯಗಳು, ಸ್ವಾಭಾವಿಕತೆಯ ಸಂಕೇತವಾಗಿದೆ. ಭಾರತವನ್ನು ಆಳಿದ ಮೊಘಲರು ಅನೇಕ ಹಿಂದೂ ದೇವಾಲಯಗಳನ್ನು ನಾಶಪಡಿಸಿದ್ದಾರೆ. ಅವರಿಗೆ ತಿರುಗೇಟು ನೀಡಿದ್ದ ರಾಜ ಮಹಾರಾಜರು ದೇಶ ಸೇವೆಗಾಗಿ  ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಪುನರ್ ನಿರ್ಮಾಣವು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

SCROLL FOR NEXT