ದೇಶ

ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಪ್ರಕರಣ ದಾಖಲಿಸಿಕೊಂಡ ಸಿಬಿಐ!

Manjula VN

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆಯಲ್ಲಿ 19 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ ಘಾಜಿಯಾಬಾದ್ ಎಸಿಬಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ.

ಸಿಬಿಐ ಇಂದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದೆ ಎಂದು ಸಿಬಿಐನ ಪ್ರಕಟಣೆ ತಿಳಿಸಿದೆ. ಈ ಹಿಂದೆ ದೂರಿನ ಆಧಾರದ ಮೇಲೆ ಹತ್ರಾಸ್ ಜಿಲ್ಲೆಯ ಚಂದ್ಪಾ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಈ ಹಿಂದೆ ಉತ್ತರಪ್ರದೇಶ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಉತ್ತರಪ್ರದೇಶ ಸರ್ಕಾರದ ಶಿಫಾರಸ್ಸನ್ನು ಇದೀಗ ಅಂಗೀಕರಿಸಿರುವ ಕೇಂದ್ರ ತನಿಖಾ ಸಂಸ್ಥೆಯು ಪ್ರಕರಣ ದಾಖಲಿಸಿಕೊಂಡಿದೆ ಎಂದು ತಿಳಿದುಬಂದಿದೆ. 

2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಗ್ಯಾಂಗ್​ರೇಪ್​ ಮಾದರಿಯಲ್ಲೇ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿದ್ದು, ಸೆ. 14ರಂದು ಯುವತಿಯು ತಮ್ಮ ಜಮೀನಿನಲ್ಲಿ ತಾಯಿಯೊಂದಿಗೆ ಮೇವು ತರಲು ಹೋಗಿದ್ದಾಗ ನಾಲ್ವರು ಕಾಮುಕರು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅಲ್ಲದೆ, ಆಕೆಯ ನಾಲಿಗೆಯನ್ನು ಕತ್ತರಿಸಿದ್ದಾರೆ. ಆಕೆಯ ಬೆನ್ನುಮೂಳೆ ಮತ್ತು ಕುತ್ತಿಗೆಗೆ ಹಾನಿ ಮಾಡಿದ್ದಾರೆ. ಗಂಭೀರ ಗಾಯಗಳಿಂದ ದೆಹಲಿಯ ಸಫ್ದಾರ್​ ಜಂಗ್​ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. 

SCROLL FOR NEXT