ದೇಶ

ಕದ್ದಲೂರು: ದಲಿತ ಪಂಚಾಯತ್ ಅಧ್ಯಕ್ಷೆಯನ್ನು ನೆಲದಲ್ಲಿ ಕುಳ್ಳಿರಿಸಿ ಅವಮಾನ, ಇಬ್ಬರ ಬಂಧನ

Sumana Upadhyaya

ಕದ್ದಲೂರು: ಪಂಚಾಯತ್ ಅಧ್ಯಕ್ಷೆಯಾಗಿರುವ ದಲಿತ ಮಹಿಳೆ ಸಭೆಯಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳಬಾರದು, ರಾಷ್ಟ್ರಧ್ವಜವನ್ನು ಹಾರಿಸಬಾರದು ಎಂದು ಉಪಾಧ್ಯಕ್ಷ ಅಪಮಾನ ಮಾಡಿ ನೆಲದಲ್ಲಿ ಕುಳ್ಳಿರಿಸಿದ ಘಟನೆ ತಮಿಳು ನಾಡಿನ ಕದ್ದಲೂರಿನಲ್ಲಿ ನಡೆದಿದ್ದು ವ್ಯಾಪಕವಾಗಿ ಸುದ್ದಿಯಾಗಿದೆ.

ಪೊಲೀಸರು ತಲೆಮರೆಸಿಕೊಂಡಿರುವ ಉಪಾಧ್ಯಕ್ಷ ಮೋಹನ್ ರಾಜು ಅವರಿಗಾಗಿ ಹುಡುಕುತ್ತಿದ್ದಾರೆ. ಪಂಚಾಯತ್ ಕಾರ್ಯದರ್ಶಿ ಸಿಂದುಜಾ ಮತ್ತು ವಾರ್ಡ್ ಸದಸ್ಯ ಆರ್ ಸುಗುಮಾರ್ ಅವರನ್ನು ಘಟನೆ ಸಂಬಂಧ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.ಜಿಲ್ಲಾಧಿಕಾರಿ ಚಂದ್ರ ಶೇಖರ್ ಸಖಮುರಿ ಮತ್ತು ಎಸ್ಪಿ ಎಂ ಶ್ರೀ ಅಭಿನವ್ ಗ್ರಾಮಕ್ಕೆ ಭೇಟಿ ನೀಡಿ ಚಿದಂಬರಂ ಪಟ್ಟಣದ ದೇವಸ್ಥಾನ ಸಮೀಪ ಸಭೆ ನಡೆಸಿದ್ದಾರೆ.

ನಡೆದ ಘಟನೆಯೇನು?: ಕದ್ದಲೂರಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ಎಸ್ ರಾಜೇಶ್ವರಿ ಅವರನ್ನು ಇತ್ತೀಚೆಗೆ ನಡೆದ ಪಂಚಾಯತ್ ಸಭೆಯಲ್ಲಿ ದಲಿತ ಮಹಿಳೆ ಎಂಬ ಕಾರಣಕ್ಕೆ ಅವಮಾನ ಮಾಡಿ ನೆಲದಲ್ಲಿ ಕುಳಿತುಕೊಳ್ಳುವಂತೆ ಸೂಚಿಸಲಾಯಿತು. ಇದು ನಡೆದಿದ್ದು ಕಳೆದ ಜುಲೈ 17ರಂದು. ತಾವು ದಲಿತ ಮಹಿಳೆ ಎಂಬ ಕಾರಣಕ್ಕೆ ಎಲ್ಲಾ ವಿಷಯದಲ್ಲಿ ಅವಮಾನ ಮಾಡುತ್ತಿದ್ದು ಉಪಾಧ್ಯಕ್ಷರು ಸ್ವಾತಂತ್ರ್ಯ ದಿನಾಚರಣೆ ಮತ್ತು ಇತರ ಸಮಾರಂಭ ಸಮಯಗಳಲ್ಲಿ ರಾಷ್ಟ್ರಧ್ವಜವನ್ನು ಅವರೇ ಹಾರಿಸುತ್ತಾರೆ. ತಮಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

SCROLL FOR NEXT