ದೇಶ

ಲಡಾಖ್ ಸಂಘರ್ಷ: ಪಾಕ್ ನಂತರ ಚೀನಾದ ಕುತಂತ್ರ ಎಂದ ರಾಜನಾಥ್ ಸಿಂಗ್

Lingaraj Badiger

ನವದೆಹಲಿ: ಪಾಕಿಸ್ತಾನದ ನಂತರ ಚೀನಾ ಕೂಡ ಭಾರತದ ಗಡಿಯಲ್ಲಿ ವಿವಾದವನ್ನು ಸೃಷ್ಟಿಸುತ್ತಿದೆ, ಅದು "ಕುತಂತ್ರದ" ಒಂದು ಭಾಗ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.

ಕಳೆದ ಐದು ತಿಂಗಳಿಂದ ಪೂರ್ವ ಲಡಾಖ್ ನಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ಈ ಘರ್ಷಣೆ ಹಿಂದೆ ಭಾರೀ ಕುತಂತ್ರವಿರುವ ಬಗ್ಗೆ ರಕ್ಷಣಾ ಸಚಿವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇಂದು ಏಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್‌ಒ) ನಿರ್ಮಿಸಿದ 44 ಸೇತುವೆಗಳನ್ನು ವರ್ಚುವಲ್ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ರಕ್ಷಣಾ ಸಚಿವರು, ಭಾರತವನ್ನು ಕೆಣಕುವ ಉದ್ಶೇಶದಿಂದಲೇ ಈ ಘರ್ಷಣೆಗೆ ಇಂಬು ನೀಡಲಾಗುತ್ತಿದೆ ಎಂದರು.

ಭಾರತದ ಗಡಿಗಳಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಿ ಭಾರತವನ್ನು ಕಟ್ಟಿಹಾಕಲು ಪಾಕ್-ಚೀನಾ ಜಂಟಿ ಪ್ರಯತ್ನ ನಡೆಸುತ್ತಿದ್ದು, ಇದರ ಭಾಗವಾಗಿಯೇ ಲಡಾಖ್ ಗಡಿಯಲ್ಲಿ ಸಮಸ್ಯೆ ಸೃಷ್ಟಿಸಲಾಗಿದೆ ಎಂದು ರಾಜನಾಥ್ ಸಿಂಗ್ ಆರೋಪಿಸಿದರು.

ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಪ್ರಚೋದಿತ ದಾಳಿಗಳು ನಿರಂತರವಾಗಿದ್ದು, ಇದೀಗ ಚೀನಾ ಕೂಡ ಲಡಾಖ್ ಗಡಿಯಲ್ಲಿ ಕ್ಯಾತೆ ತೆಗೆದಿದೆ. ಈ ವಿದ್ಯಮಾನಗಳನ್ನು ಗಮನಿಸಿದರೆ ಉದ್ದೇಶಪೂರ್ವಕವಾಗಿಯೇ ಸಮಸ್ಯೆಯನ್ನು ಸೃಷ್ಟಿಸಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

SCROLL FOR NEXT