ದೇಶ

ಜನನ ಮರಣ ನೋಂದಣಿಗೆ ಆಧಾರ್ ಕಾರ್ಡ್ ನೀಡುವ ಆಗತ್ಯವಿಲ್ಲ: ರಿಜಿಸ್ಟ್ರಾರ್ ಜನರಲ್ ಇಂಡಿಯಾ

Srinivas Rao BV

ನವದೆಹಲಿ: ಜನನ ಮರಣ ನೋಂದಣಿಗೆ ಆಧಾರ್ ಕಾರ್ಡ್ ಹಾಜರುಪಡಿಸುವ ಆಗತ್ಯವಿಲ್ಲ ಎಂದು ರಿಜಿಸ್ಟ್ರಾರ್ ಜನರಲ್ ಇಂಡಿಯಾ( ಆರ್ ಜಿ ಐ) ಸ್ಪಷ್ಟಪಡಿಸಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ಪ್ರಶ್ನೆಗೆ ರಿಜಿಸ್ಟ್ರಾರ್ ಜನರಲ್ ಇಂಡಿಯಾ ಈ ವಿವರಣೆಯನ್ನು ನೀಡಿದೆ. ಒಂದೊಮ್ಮೆ ಯಾರಾದರೂ ಸ್ವಯಂ ಪ್ರೇರಣೆಯಿಂದ ಆಧಾರ್ ಸಲ್ಲಿಸಿದರೆ, ಆ ದಾಖಲೆಯನ್ನು ದತ್ತಾಂಶಗಳಲ್ಲಿ ಸಂಗ್ರಹಿಸಬಾರದು ಎಂದು ರಿಜಿಸ್ಟ್ರಾರ್ ಜನರಲ್ ಇಂಡಿಯಾ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಮರಣ ದೃಢೀಕರಣ ಪತ್ರ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕೇ ? ಎಂದು ವಿಶಾಖಪಟ್ಟಣದ ವಕೀಲ ಎಂಬಿಎಸ್ ಅನಿಲ್ ಕುಮಾರ್ ಎಂಬುವರು ಆರ್ಟಿಐ ಮೂಲಕ ಕೇಳಿದ್ದರು. ಆ ಮನವಿಗೆ ಪ್ರತಿಕ್ರಿಯಿಸಿ. ಜನನ ಮತ್ತು ಮರಣ ದೃಢೀಕರಣಕ್ಕೆ ಆಧಾರ್ ಸಂಖ್ಯೆ ಅಗತ್ಯವಿಲ್ಲ ಎಂದು ಆರ್ಜಿಐ ಹೇಳಿದೆ. 1969 ರ ಜನನ ಮತ್ತು ಮರಣಗಳ ನೋಂದಣಿ (ಆರ್ಬಿಡಿ) ಕಾಯ್ದೆ ಅಡಿಯಲ್ಲಿ ಪ್ರಸ್ತುತ ಜನನ ಮತ್ತು ಮರಣಗಳ ನೋಂದಣಿ ನಡೆಯುತ್ತಿದೆ ಎಂದು ಹೇಳಿದೆ.

ದೇಶದಲ್ಲಿ ಸಂಭವಿಸುವ ಪ್ರತಿಯೊಂದು ಜನನ, ಮರಣ ನೋಂದಣಿಯನ್ನು ನೋಂದಣಿ ಅಧಿನಿಯಮ 1969 ರನ್ವಯ ಕಡ್ಡಾಯ ಮಾಡಲಾಗಿದೆ. ಕಾಯ್ದೆಯು ಕರ್ನಾಟಕ ರಾಜ್ಯದಲ್ಲಿ 1970 ರಿಂದ ಜಾರಿಗೆ ಬಂದಿದೆ. ರಾಜ್ಯದಲ್ಲಿ ಜನನ-ಮರಣ ನೋಂದಣಿ ಕಾರ್ಯಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಹೊರತಂದಿದ್ದು, ಈ ನಿಯಮಗಳು 1971 ರಿಂದ ರಾಜ್ಯಾದ್ಯಂತ ಜಾರಿಗೊಳಿಸಲಾಗಿತ್ತು. ತದನಂತರ, ನೋಂದಣಿ ಪದ್ಧತಿಯನ್ನು ಆಧುನಿಕ ತಂತ್ರಜ್ಞಾನಕ್ಕೆ ಅನುಕೂಲವಾಗುವಂತೆ ಮಾಡುವ ಉದ್ದೇಶದಿಂದ ನಿಯಮಗಳಲ್ಲಿ ಕೆಲವು ಮಾರ್ಪಾಡು ಮಾಡಿ ನೋಂದಣಿಯ ವಿಧಿ ವಿಧಾನಗಳನ್ನು ಪುನರ್ರಚಿಸಿ ಪರಿಷ್ಕೃತ ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು, 1999 ನ್ನು 01-01-2000 ರಿಂದ ಜಾರಿಗೊಳಿಸಲಾಗಿದೆ.

ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ಜನನ ಮರಣ ನೋಂದಣಿ ಮಾಡಲು ಆನ್ ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದು, ಗಣಕೀಕೃತ ಜನನ ಮರಣ ಪ್ರಮಾಣ ಪತ್ರಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

SCROLL FOR NEXT