ದೇಶ

ಕರ್ನಾಟಕ ಪ್ರವಾಹ: ರಾಜ್ಯಕ್ಕೆ ಅಗತ್ಯ ನೆರವಿನ ಭರವಸೆ ನೀಡಿದ ಪ್ರಧಾನಿ ಮೋದಿ

Srinivasamurthy VN

ಬೆಂಗಳೂರು: ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕಕ್ಕೆ ಎಲ್ಲ ರೀತಿಯ ನೆರವನ್ನೂ ಕೇಂದ್ರ ಸರ್ಕಾರ ಒದಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಈ ಕುರಿತಂತೆ ಶುಕ್ರವಾರ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ಅವರು, ಕರ್ನಾಟಕದ ವಿವಿಧ ಭಾಗಗಳಲ್ಲಿ ಆಗಿರುವ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೇನೆ. ಪ್ರವಾಹಕ್ಕೆ ಸಿಲುಕಿರುವ ಕರ್ನಾಟಕದ ಸಹೋದರಿಯರು ಮತ್ತು ಸಹೋದರರೊಂದಿಗೆ ನಾವು  ಒಟ್ಟಾಗಿ ನಿಲ್ಲುತ್ತೇವೆ. ರಕ್ಷಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವನ್ನೂ ಒದಗಿಸಲಾಗುವುದು ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ರಾಜ್ಯಕ್ಕೆ ಹೆಚ್ಚಿನ ನೆರವು: ಸಿಎಂ ಬಿಎಸ್ ವೈ
ರಾಜ್ಯದ ಉತ್ತರ ಭಾಗದಲ್ಲಿ ತಲೆದೋರಿರುವ ನೆರೆ ಪರಿಸ್ಥಿತಿ ಬಗ್ಗೆ ಗೃಹ ಸಚಿವ ಅಮಿತ್ ‌ಶಾ ಜತೆ ಮಾತನಾಡಿದ್ದು, ಹೆಚ್ಚಿನ ನೆರವು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ದಸರಾ ಉದ್ಘಾಟನೆಗೆ ಶುಕ್ರವಾರ ಮೈಸೂರಿಗೆ ಬಂದ ಅವರು ಮಾಧ್ಯಮದವರ  ಜತೆ ಮಾತನಾಡಿ, ನೆರೆ ಹಾವಳಿಗೆ ಒಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ್ದೇನೆ.‌ 5-6 ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಹಾನಿ‌ ಉಂಟಾಗಿದೆ. ನಷ್ಟದ ಬಗ್ಗೆ ಅಂದಾಜು ಮಾಡಿ ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ. ಸಂತ್ರಸ್ತರಿಗೆ ಪರಿಹಾರ ನೀಡಲು‌ ಎಲ್ಲ ಸಿದ್ಧತೆ ಮಾಡಲಾಗಿದೆ.  ಹಣ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಆಗಿದೆ. ತಕ್ಷಣದ ಪರಿಹಾರವಾಗಿ ತಲಾ 10 ಸಾವಿರ ರೂ ಕೊಡಲಾಗಿದೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ವೆಚ್ಚದಲ್ಲಿ ಮನೆ ಕಟ್ಟಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

SCROLL FOR NEXT