ದೇಶ

ನೂತನ ಕೃಷಿ ಕಾನೂನು ಪ್ರತಿಯೊಬ್ಬ ರೈತನ ಆತ್ಮದ ಮೇಲಿನ ಆಕ್ರಮಣ: ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ

Vishwanath S

ಚಂಡೀಗಢ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ಪ್ರತಿಯೊಬ್ಬ ರೈತನ ಆತ್ಮದ ಮೇಲಿನ ಆಕ್ರಮಣ ಮತ್ತು ಅಂತಹ ಶಾಸನಗಳು ದೇಶದ ಅಡಿಪಾಯವನ್ನು "ದುರ್ಬಲಗೊಳಿಸುತ್ತವೆ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ನಿರಂತರ ದಾಳಿ ಮುಂದುವರೆಸಿರುವ ರಾಹುಲ್ ಗಾಂಧಿ ಅವರು "ಈ ಮೂರು ಕಾನೂನುಗಳು ಈ ದೇಶದ ಪ್ರತಿಯೊಬ್ಬ ರೈತನ ಆತ್ಮದ ಮೇಲಿನ ಆಕ್ರಮಣ, ಅವು ರೈತರ ಬೆವರು ಮತ್ತು ರಕ್ತದ ಮೇಲಿನ ಆಕ್ರಮಣವಾಗಿದೆ. ಈ ದೇಶದ ರೈತರು ಮತ್ತು ಕಾರ್ಮಿಕರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ. "ನಾವು ದೇಶದ ಅಡಿಪಾಯವನ್ನು ದುರ್ಬಲಗೊಳಿಸಿದರೆ, ಭಾರತವು ದುರ್ಬಲಗೊಳ್ಳುತ್ತದೆ ಎಂದು ಹೇಳಿದರು.

ಇತ್ತೀಚೆಗೆ ಪಂಜಾಬ್ ಮತ್ತು ಹರಿಯಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾನೂನುಗಳ ವಿರುದ್ಧ ಅವರು ನಡೆಸಿದ "ಟ್ರಾಕ್ಟರ್ ರ್ಯಾಲಿಗಳನ್ನು" ಉಲ್ಲೇಖಿಸಿದ ಗಾಂಧಿ, "ನಾನು ಕೆಲವು ದಿನಗಳ ಹಿಂದೆ ಪಂಜಾಬ್ ಮತ್ತು ಹರಿಯಾಣಕ್ಕೆ ಹೋಗಿ ಬಂದಿದ್ದೇನೆ. ಈ ಮೂರು ಕಾನೂನುಗಳು ತಮ್ಮ ಮೇಲಿನ ದಾಳಿ ಎಂದು ಪ್ರತಿಯೊಬ್ಬ ರೈತ ಮತ್ತು ಕಾರ್ಮಿಕರಿಗೆ ತಿಳಿದಿದೆ ಎಂದು ಹೇಳಿದರು.

ಅಕ್ಟೋಬರ್ 19ರಂದು ಈ ಕಾನೂನುಗಳ ವಿರುದ್ಧ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲು ಪಂಜಾಬ್ ಸರ್ಕಾರ ನಿರ್ಧರಿಸಿದೆ. ಅಲ್ಲಿ ಶಾಸಕರು ಈ ಕೃಷಿ ಕಾನೂನುಗಳ ಬಗ್ಗೆ ನಿರ್ಧರಿಸುತ್ತಾರೆ ಎಂದರು. 

"ಕಾಂಗ್ರೆಸ್ ಪಕ್ಷ ಹೋರಾಟದ ಮೂಲಕ ಅಡಿಪಾಯವನ್ನು ರಕ್ಷಿಸಲು ಮತ್ತು ಬಲಪಡಿಸಲು ಕೆಲಸ ಮಾಡುತ್ತೇವೆ. ಇದು ನಮ್ಮ ಮತ್ತು ಕೇಂದ್ರ ಸರ್ಕಾರದ ನಡುವಿನ ವ್ಯತ್ಯಾಸವಾಗಿದೆ. ಅವರು ಕಟ್ಟಡದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಪಂಚಾಯತ್ ಮತ್ತು ಜನರು ಮತ್ತು ಅವರೊಂದಿಗೆ ಮಾತನಾಡದೆ ಮೇಲಿನಿಂದ ಯೋಜನೆಗಳನ್ನು ಎಸೆಯುತ್ತಾರೆ. ಕಾನೂನುಗಳು ಭಾರತದ ಅಡಿಪಾಯವನ್ನು ದುರ್ಬಲಗೊಳಿಸುತ್ತವೆ ಎಂದು ಅವರು ಹೇಳಿದರು.

"ಈ ಕಾನೂನುಗಳು ರೈತರು ಮತ್ತು ಕಾರ್ಮಿಕರ ಪರವಾಗಿದ್ದರೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇವುಗಳು ಅಂಗೀಕಾರಗೊಳ್ಳುವ ಮೊದಲು ಸರ್ಕಾರವು ಚರ್ಚೆಗೆ ಏಕೆ ಅವಕಾಶ ನೀಡಲಿಲ್ಲ? ಅವರು ಚರ್ಚೆಗೇಕೆ ಹೆದರುತ್ತಿದ್ದರು? ಇಡೀ ದೇಶವು ಈ ಚರ್ಚೆಯನ್ನು ನೋಡಿ ನಿರ್ಧರಿಸಿದ್ದರೆ ಆಗ ಈ ಕಾನೂನುಗಳು ರೈತರ ಅನುಕೂಲಕ್ಕಾಗಿ ಎಂದು ಹೇಳಬಹುದಿತ್ತು ಎಂದು ಹೇಳಿದರು. 

SCROLL FOR NEXT