ದೇಶ

ತಂದೆಯ ಪರಂಪರೆಯ ಸಮರ್ಥಿಸಿಕೊಂಡ ತೇಜಶ್ವಿ, ಚಿರಾಗ್; ರಾಜಕೀಯ ಕುಟುಂಬಗಳ ಇತರ ಕುಡಿಗಳು ಚುನಾವಣಾ ಕಣಕ್ಕೆ

Lingaraj Badiger

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜ್ಯದ ಎರಡು ಪ್ರಮುಖ ರಾಜಕೀಯ ವಂಶಗಳಾದ ಪ್ರಸಾದ್ ಮತ್ತು ಪಾಸ್ವಾನ್ ಗಳು ತಮ್ಮ ಪಿತೃಗಳ ಅಸಾಧಾರಣ ಪರಂಪರೆಯನ್ನು ರಕ್ಷಿಸಲು ಮತ್ತು ಅದನ್ನು ಮುಂದುವರೆಸಿಕೊಂಡು ಹೋಗಲು ಚುನಾವಣಾ ಹೋರಾಟ ನಡೆಸುತ್ತಿದ್ದಾರೆ.

ಐದು ಪಕ್ಷಗಳ ಮಹಾಘಟಬಂಧನ್ ಚುಕ್ಕಾಣಿ ಹಿಡಿಯಲಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಕಿರಿಯ ಪುತ್ರ ತೇಜಶ್ವಿ ಯಾದವ್ ಅವರು ನಾಲ್ಕು ವರ್ಷಗಳ ಕಾಲ ಬಿಹಾರದ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ತಮ್ಮ ತಂದೆ ಲಾಲು ಪ್ರಸಾದ್ ಯಾದವ್ ಅವರ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಿಸುತ್ತಾರೆ.

ಇನ್ನು ಇತ್ತೀಚಿಗಷ್ಟೇ ನಿಧನರಾದ ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಅವರು ತಮ್ಮ ತಂದೆಯ ಜೀವಿತಾವಧಿಯಲ್ಲೇ ಲೋಕ ಜನಶಕ್ತಿ ಪಕ್ಷ(ಎಲ್ಜೆಪಿ)ದ ನೇತೃತ್ವ ವಹಿಸಿಕೊಂಡಿದ್ದರೂ ತಂದೆಯ ಅನುಪಸ್ಥಿತಿಯಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ.

ತೇಜಶ್ವಿ ಮತ್ತು ಚಿರಾಗ್ ಅವರ ಹೊರತಾಗಿ, ರಾಜಕೀಯ ಕುಟಂಬಕ್ಕೆ ಸೇರಿದ ಇತರ ಯುವಕ-ಯುವತಿಯರು ಸಹ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಆರ್‌ಜೆಡಿ ಉಪಾಧ್ಯಕ್ಷ ಶಿವಾನಂದ್ ತಿವಾರಿ ಅವರ ಪುತ್ರ ರಾಹುಲ್ ತಿವಾರಿ ಬಕ್ಸಾರ್‌ನ ಶಹಪುರ್ ದಿಂದ ಸ್ಪರ್ಧಿಸುತ್ತಿದ್ದು, ಆರ್ ಜೆಡಿ ರಾಜ್ಯ ಘಟಕದ ಮುಖ್ಯಸ್ಥ ಜಗದಾನಂದ್ ಸಿಂಗ್ ಅವರ ಪುತ್ರ ಸುಧಾಕರ್ ಸಿಂಗ್ ಅವರು ರಾಮ್‌ಗಢದಿಂದ ಟಿಕೆಟ್ ಪಡೆದಿದ್ದಾರೆ.

ಆರ್‌ಜೆಡಿ ಮುಖ್ಯಸ್ಥರ ಆಪ್ತ ಎಂದೇ ಪರಿಗಣಿಸಲ್ಪಟ್ಟ ಮಾಜಿ ಕೇಂದ್ರ ಸಚಿವ ಜೈ ಪ್ರಕಾಶ್ ನರೈನ್ ಯಾದವ್ ಅವರು ತಮ್ಮ ಪುತ್ರಿ ದಿವ್ಯಾ ಪ್ರಕಾಶ್ ಅವರಿಗೆ ತಾರಾಪುರದಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

SCROLL FOR NEXT