ದೇಶ

ಸಚಿವೆ ವಿರುದ್ಧ ಅಗೌರವವಾಗಿ ಮಾತನಾಡಿಲ್ಲ, ಬಿಜೆಪಿ ನಾಯಕರು ತಪ್ಪಾಗಿ ಬಿಂಬಿಸುತ್ತಿದ್ದಾರೆ: ಕಮಲ್ ನಾಥ್

Sumana Upadhyaya

ಭೋಪಾಲ್: ಸಚಿವೆಯ ಬಗ್ಗೆ ಹೇಳಿಕೆ ನೀಡಿ ವಿವಾದ ಎಬ್ಬಿಸಿರುವ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್, ಬಿಜೆಪಿ ಜನರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಇಮರ್ತಿ ದೇವಿ ಅವರನ್ನು ಐಟಂ ಎಂದು ಕರೆದು ಆಡಳಿತಾರೂಢ ಪಕ್ಷಗಳ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಅವರು ಈ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಕಮಲ್ ನಾಥ್, ನಾನು ಸಚಿವೆ ವಿರುದ್ಧ ಯಾವುದೇ ಅಗೌರವ ಹೇಳಿಕೆ ನೀಡಿಲ್ಲ, ಆದರೆ ನೀವು ಸುಳ್ಳು ಹೇಳುತ್ತೀರಿ, ನಾನು ಹೇಳಿರುವ ಶಬ್ದದಲ್ಲಿ ಸಾಕಷ್ಟು ಅರ್ಥವಿದೆ. ಆ ಶಬ್ದವನ್ನು ದುರುದ್ದೇಶಪೂರ್ವಕವಾಗಿ ತಪ್ಪಾಗಿ ವ್ಯಾಖ್ಯಾನಿಸಿ ನಿಮ್ಮ ಪಕ್ಷದವರು ನನ್ನ ವಿರುದ್ಧ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ಏಳು ತಿಂಗಳ ಬಿಜೆಪಿ ಆಡಳಿತದಲ್ಲಿ ಮಧ್ಯ ಪ್ರದೇಶ ಮತ್ತೊಮ್ಮೆ ಮಹಿಳೆಯರ ವಿರುದ್ಧದ ಅಪರಾಧದಲ್ಲಿ ಉನ್ನತ ಸ್ಥಾನಕ್ಕೆ ಹೋಗಿದೆ, ಆದರೆ ಶಿವರಾಜ್ ಸಿಂಗ್ ಚೌಹಾಣ್ ಅವರು ಯಾವುದೇ ರೀತಿಯ ಕಠಿಣ ಕ್ರಮ ಕೈಗೊಂಡಿಲ್ಲ. ನಿಮ್ಮ 16 ವರ್ಷಗಳ ಆಡಳಿತದಲ್ಲಿ ರಾಜ್ಯ ಹೆಣ್ಣುಮಕ್ಕಳ ವಿರುದ್ಧ ಅಪರಾಧ, ಅತ್ಯಾಚಾರ ಕೇಸುಗಳಲ್ಲಿ ಉನ್ನತ ಸ್ಥಾನದಲ್ಲಿದೆ. ಆದರೆ ಇಷ್ಟು ದಿನ ನೀವು ಮಾತ್ರ ಮೌನವಾಗಿದ್ದೀರಿ, ಹೆಣ್ಣು ಮಕ್ಕಳ ಬಗ್ಗೆ ಅಷ್ಟೊಂದು ಗೌರವ, ಕಾಳಜಿಯಿದ್ದಿದ್ದರೆ ಏಕೆ ನೀವು ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮಹಿಳೆಯರು ಮತ್ತು ದಲಿತರ ಬಗ್ಗೆ ಅಷ್ಟು ಗೌರವ ಇದ್ದರೆ, ಉತ್ತರ ಪ್ರದೇಶದ ಹತ್ರಾಸ್ ಘಟನೆ, ಸ್ವಾಮಿ ಚಿನ್ಮಯಾನಂದ್, ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಒಳಗೊಂಡ ಘಟನೆ ಮತ್ತು ರೇವಾ ಜೈಲಿನಲ್ಲಿ ಮಹಿಳಾ ಬಂಧಿತರೊಂದಿಗೆ ನಡೆದ ಘಟನೆಗಾಗಿ ನೀವು ಮೌನ ಮತ್ತು ಉಪವಾಸವನ್ನು ಮಾಡುತ್ತಿದ್ದಿರಿ, ಆದರೆ ನೀವು ಸೋನಿಯಾ ಗಾಂಧಿಯವರಿಗೆ ಬರೆದ ಪತ್ರದಲ್ಲಿ ಮಹಿಳಾ ಜಾತಿ ಬಗ್ಗೆ ನಮೂದಿಸಿದ್ದೀರಿ, ಅಂದರೆ  ನಿಮ್ಮ ಅನೈತಿಕ ರಾಜಕಾರಣದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಮಲ್ ನಾಥ್ ಪತ್ರದಲ್ಲಿ ಆರೋಪಿಸಿದ್ದಾರೆ.

SCROLL FOR NEXT