ದೇಶ

ಗಡಿ ಸಂಘರ್ಷದ ನಡುವಲ್ಲೇ ಬಂಧಿತ ಪಿಎಲ್‌ಎ ಸೈನಿಕನನ್ನು ಚೀನಾಗೆ ಹಸ್ತಾಂತರಿಸಿದ ಭಾರತ

Manjula VN

ಲಡಾಖ್: ಪೂರ್ವ ಲಡಾಕ್‌ನಲ್ಲಿ ಉಭಯ ದೇಶಗಳ ನಡುವಿನ ಗಡಿ ಉದ್ವಿಗ್ನತೆ ಮತ್ತು ಸೈನಿಕರ ಭಿನ್ನಾಭಿಪ್ರಾಯದ ನಡುವೆಯೂ ಭಾರತೀಯ ಸೈನಿಕರು ಮಾನವೀಯತೆಯನ್ನು ಮೆರೆಯುತ್ತಿದ್ದಾರೆ. ಇತ್ತೀಚಿಗಷ್ಟೇ ದಾರಿತಪ್ಪಿ ಭಾರತದ ಗಡಿ ಪ್ರವೇಶಿಸಿದ್ದ ಚೀನಾದ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕನಿಗೆ ಆಹಾರ, ತೀವ್ರ ಚಳಿಯಿಂದ ರಕ್ಷಣೆ ನೀಡುವ ಬಟ್ಟೆ, ಔಷಧಿ ನೀಡಿ ಉಪಚರಿಸಿದ್ದ ಸೈನಿಕರು ಇದೀಗ ಆತನನ್ನು ವಾಪಸ್ ಕಳುಹಿಸಿದ್ದಾರೆ.

ಸೇನಾ ವಶದಲ್ಲಿದ್ದ ಚೀನಿ ಸೈನಿಕನನ್ನು ಕೊರ್ಪೊರಲ್ ವಾಂಗ್ ಯಾ ಲಾಂಗ್ ಎಂದು ಗುರ್ತಿಸಲಾಗಿದೆ. ಚುಶುಲ್ - ಮೊಲ್ಡೊ ಪ್ರದೇಶದಲ್ಲಿ ಸೈನಿಕನನ್ನು ಚೀನಾದ ಅಧಿಕಾರಿಗಳಿಗೆ ಮಂಗಳವಾರ ರಾತ್ರಿ ಹಸ್ತಾಂತರ ಮಾಡಲಾಗಿದೆ. 

ಈತನನ್ನು ಚುಮರ್-ಡೆಮ್ಚೋಕ್ ಪ್ರದೇಶದಿಂದ ಭಾರತೀಯ ಸೇನೆ ವಶಕ್ಕೆ ಪಡೆದಿತ್ತು. ಈತನನ್ನು ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಹಸ್ತಾಂತರ ಮಾಡುವುದಕ್ಕೂ ಮುಂಚಿತವಾಗಿ ಭಾರತೀಯ ಸೇನೆಯ ಚೀನಿ ತಜ್ಞರು ಈತನನ್ನು ವಿಚಾರಣೆಗೆ ಒಳಪಡಿಸಿದ್ದರು ಎಂದು ಹೇಳಲಾಗಿದೆ.

ಪೂರ್ಣ ಪ್ರಕ್ರಿಯೆಯನ್ನು ಮುಗಿಸಿದ ಬಳಿಕ, ಪ್ರಸ್ತುತ ಇರುವ ಶಿಷ್ಟಾಚಾರದ ಅನ್ವಯ ಸೈನಿಕನನ್ನು ಚೀನಾಗೆ ಹಸ್ತಾಂತರ ಮಾಡಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ. 

ಸೈನಿಕನ ಮಾಹಿತಿಯನ್ನು ನೀಡುವಂತೆ ಚೀನಾ ಕೂಡ ಭಾರತೀಯ ಸೇನೆಗೆ ಮನವಿಯನ್ನು ಮಾಡಿತ್ತು ಎಂದು ಹೇಳಲಾಗಿದೆ.

SCROLL FOR NEXT