ದೇಶ

ಬಿಹಾರ ಚುನಾವಣೆ: ಆರ್ ಜೆಡಿ ಪ್ರಣಾಳಿಕೆ ಬಿಡುಗಡೆ, 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ

Nagaraja AB

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನತಾ ದಳ ( ಆರ್ ಜೆಡಿ) ಶನಿವಾರ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಬಿಹಾರದಲ್ಲಿನ ಲಕ್ಷಾಂತರ ಯುವಕರಿಗೆ ಉದ್ಯೋಗವಕಾಶ ಒದಗಿಸಲು ಬದ್ಧವಾಗಿರುವುದಾಗಿ ಪುನರ್ ಉಚ್ಛರಿಸಿದೆ.

ಉದ್ಯೋಗ, ಉನ್ನತ ಶಿಕ್ಷಣ, ಸ್ಮಾರ್ಟ್ ಹಳ್ಳಿಗಳು, ಸ್ವ ಸ್ವಹಾಯ ಗುಂಪುಗಳು, ಕೈಗಾರಿಕೆಗಳು ಮತ್ತು ಕೃಷಿ ಕ್ಷೇತ್ರಕ್ಕೆ  ಆರೋಗ್ಯ ಮತ್ತಿತರ ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ 17 ವಿಚಾರಗಳ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.

''ಹಮರಾ ಪ್ರಾಣ್ ' ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಆರ್ ಜೆಡಿ ಪ್ರಣಾಳಿಕೆ  16 ಪುಟಗಳನ್ನು ಹೊಂದಿದ್ದು, 10 ಲಕ್ಷ ಉದ್ಯೋಗದ ಭರವಸೆಯನ್ನು ನೀಡಲಾಗಿದೆ.

ನಮ್ಮ ಸರ್ಕಾರ ಪ್ರತಿಯೊಂದು ಜಿಲ್ಲೆಗಳಲ್ಲಿ ಉದ್ಯೋಗ ಕೇಂದ್ರಗಳನ್ನು ಸ್ಥಾಪಿಸಲಾಗುವುದು, ಮನೇಗ್ರಾ ಮಾನವ ದಿನಗಳನ್ನು ಗರಿಷ್ಠ 200ದಿನಗಳಿಗೆ ಹೆಚ್ಚಿಸಲಾಗುವುದು ಎಂದು ಆರ್ ಜೆಡಿ ಹೇಳಿಕೊಂಡಿದೆ.

ರಾಜ್ಯದಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲಾಗುವುದು, ವಿಭಿನ್ನ ತೆರಿಗೆಯೊದಿಗೆ ಉದ್ಯೋಗವಕಾಶ ಸೃಷ್ಟಿಸುವ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗುವುದು, ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಯಸುವ ಬಿಹಾರ ಯುವಕರಿಗೆ ಅರ್ಜಿ ಶುಲ್ಕವನ್ನು ಮನ್ನಾ ಮಾಡಲಾಗುವುದು, ಮನೆಯಿಂದ ಬಂದು ಪರೀಕ್ಷೆ ಬರುವ ವಿದ್ಯಾರ್ಥಿಗಳಿಗೆ ಪ್ರಯಾಣ ದರವನ್ನು ನೀಡಲಾಗುವುದು ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದರು.

ಕಚೇರಿ ಸಹಾಯಕರು, ಗ್ರಂಥಪಾಲಕರು, ಉರ್ದು ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮೀಣ ವೈದ್ಯರ ಬೇಡಿಕೆಗಳನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗುವುದು, ಆರೋಗ್ಯ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು, ಜೀವಿಕಾ ಕಾರ್ಯಕರ್ತರಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.

SCROLL FOR NEXT