ದೇಶ

ಸಂವಿಧಾನ ವಿಧಿ 370 ಮರು ಸ್ಥಾಪನೆ ಬಗ್ಗೆ ಸುಪ್ರೀಂ ಕೋರ್ಟ್ ಏನು ಹೇಳುತ್ತದೆ ಎಂದು ಈಗಲೇ ಗ್ರಹಿಸಬೇಡಿ: ಒಮರ್ ಅಬ್ದುಲ್ಲಾ

Sumana Upadhyaya

ಶ್ರೀನಗರ: ಸಂವಿಧಾನ ವಿಧಿ 370ನ್ನು ಪುನರ್ ಸ್ಥಾಪಿಸುವುದಿಲ್ಲ ಎಂದು ಹೇಳಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ಏನು ತೀರ್ಪು ಕೊಡುತ್ತಾರೆ ಎಂದು ನೀವು ಈಗಲೇ ತೀರ್ಮಾನಕ್ಕೆ ಬರಬೇಡಿ ಎಂದು ಹೇಳಿದರು.

ನೀವು ಯಾವುದನ್ನೂ ಮರು ಸ್ಥಾಪಿಸಬೇಕು ಎಂದು ನಾವು ಬಯಸುವುದಿಲ್ಲ, ಸುಪ್ರೀಂ ಕೋರ್ಟ್ ತನ್ನ ಸ್ವತಂತ್ರತೆಯನ್ನು ಬಲಿಕೊಟ್ಟು ಶರಣಾಗಿ ನೀವು ಹೇಳಿದಂತೆ ಕೇಳಬೇಕು, ಅಲ್ಲಿಯವರೆಗೆ ನ್ಯಾಯಾಧೀಶರು ಏನು ತೀರ್ಪು ಕೊಡುತ್ತಾರೆ ಎಂದು ನೀವೇ ಊಹಿಸಿಕೊಳ್ಳಬೇಡಿ ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.

ನಿನ್ನೆ ಹೇಳಿಕೆ ನೀಡಿದ್ದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿರುವ ಸಂವಿಧಾನ ವಿಧಿ 370ನ್ನು ಮರುಸ್ಥಾಪಿಸುವುದಿಲ್ಲ ಎಂದು ಹೇಳಿದ್ದರು.

ಸಂವಿಧಾನ ವಿಧಿ 370ನ್ನು ಸೂಕ್ತ ಸಂವಿಧಾನ ಪ್ರಕ್ರಿಯೆ ಮೂಲಕ ತೆಗೆದುಹಾಕಲಾಗಿದ್ದು ಸಂಸತ್ತಿನ ಎರಡೂ ಸದನಗಳಲ್ಲಿ ಅಭೂತಪೂರ್ವ ಬೆಂಬಲದೊಂದಿಗೆ ಅದಕ್ಕೆ ಒಪ್ಪಿಗೆ ಸಿಕ್ಕಿದೆ. ದೇಶದ ಕಡೆಗೆ ನಮ್ಮ ಬದ್ಧತೆಯನ್ನು ಅದು ತೋರಿಸುತ್ತಿದ್ದು ಜನರು ಅದನ್ನು ಬೆಂಬಲಿಸಿದ್ದಾರೆ ಎಂದರು.

ಸಂವಿಧಾನ ವಿಧಿ 370ರ ರದ್ದತಿಯನ್ನು ಪ್ರಶ್ನಿಸಿ ಜಮ್ಮು-ಕಾಶ್ಮೀರದ ಹಲವು ಪಕ್ಷಗಳು ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಕೇಂದ್ರ ಸರ್ಕಾರ ಕಳೆದ ವರ್ಷ ಆಗಸ್ಟ್ 5ರಂದು ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿತ್ತು.

SCROLL FOR NEXT