ದೇಶ

ಮಹಾಘಟಬಂಧನ್ ಗೆ ಸ್ಪಷ್ಟ ಬಹುಮತ, ಉದ್ಯೋಗಕ್ಕೆ ಮೊದಲ ಆದ್ಯತೆ: ತೇಜಶ್ವಿ ಯಾದವ್

Lingaraj Badiger

ಪಾಟ್ನಾ: ಬಿಹಾರ ಚುನಾವಣೆಯಲ್ಲಿ 'ಮಹಾಘಟಬಂಧನ್' ಸ್ಪಷ್ಟ ಬಹುಮತ ಪಡೆಯಲಿದೆ ಎಂಬ ವಿಶ್ವಾಸದಲ್ಲಿರುವ ಆರ್‌ಜೆಡಿ ಮುಖಂಡ ತೇಜಶ್ವಿ ಯಾದವ್ ಅವರು, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.

ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ, ಮೊದಲ ಅಧಿವೇಶನದಲ್ಲಿಯೇ ಕೇಂದ್ರ ಸರ್ಕಾರದ "ರೈತ ವಿರೋಧಿ" ಕಾನೂನುಗಳನ್ನು ರದ್ದುಗೊಳಿಸುವ ಮಸೂದೆ ಮಂಡಿಸಲಾಗುವುದು ಎಂದು ತೇಜಶ್ವಿ ಯಾದವ್ ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ನಾನು ವಿಷಯಾಧಾರಿತ ಪ್ರಚಾರ ಮಾಡುತ್ತಿದ್ದು, ಮತ ಎಣಿಕೆಯ ದಿನವಾದ ನವೆಂಬರ್ 10 ರಂದು "ಬಿಹಾರ ಹೊಸ ಸರ್ಕಾರದ ಉದಯಕ್ಕೆ ಸಾಕ್ಷಿಯಾಗಲಿದೆ" ಎಂದು ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ತೇಜಶ್ವಿ ಯಾದವ್ ಹೇಳಿದ್ದಾರೆ.

ನಾವು ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಹಾರದ ಯುವಕರಿಗೆ 10 ಲಕ್ಷ ಉದ್ಯೋಗಗಳನ್ನು ನೀಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಯಾದವ್ ಭರವಸೆ ನೀಡಿದ್ದಾರೆ.

SCROLL FOR NEXT