ದೇಶ

ವೇತನ ವಿವಾದ: ದಲಿತ ಯುವಕನನ್ನು ಸುಟ್ಟು ಕೊಂದ ಉದ್ಯೋಗದಾತ!

Srinivas Rao BV

ಅಲ್ವಾರ್: ವೇತನ ವಿವಾದಕ್ಕೆ ಸಂಬಂಧಿಸಿದಂತೆ ದಲಿತ ಯುವಕನೋರ್ವನನ್ನು ಆತನಿಗೆ ಉದ್ಯೋಗ ನೀಡಿದ ಮಾಲಿಕರೇ ಸುಟ್ಟು ಕೊಂದಿರುವ ಘಟನೆ ರಾಜಸ್ಥಾನದ ಅಲ್ವಾರ್ ನಲ್ಲಿ ನಡೆದಿದೆ. 

ತನಗೆ ಬರಬೇಕಿದ್ದ ಬಾಕಿ ವೇತನವನ್ನು ನೀಡುವಂತೆ ಯುವಕ ನಿರಂತರವಾಗಿ ಕೇಳುತ್ತಿದ್ದ. ಇದರಿಂದ ಆಕ್ರೋಶಗೊಂಡ ಮಾಲಿಕರು ಆತನನ್ನು ಹತ್ಯೆ ಮಾಡಿದ್ದಾರೆ. 

ಈ ಪ್ರಕರಣದಲ್ಲಿ ಇಬ್ಬರು ಶಂಕಿತ ಆರೋಪಿಗಳ ಪೈಕಿ ಸ್ಥಳೀಯ ಸರ್ಪಂಚ್ ನ ಪುತ್ರನೂ ಇದ್ದಾನೆ. ರಾಜ್ಯದಲ್ಲಿ ಇಂತಹ ಹೇಯ ಕೃತ್ಯ 2 ನೇ ಬಾರಿಗೆ ನಡೆದಿದೆ. ಕಳೆದ 15 ದಿನಗಳ ಹಿಂದೆ ಅರ್ಚಕನೋರ್ವರನ್ನು ಭೂ ವಿವಾದಕ್ಕೆ ಸಂಬಂಧಿಸಿದಂತೆ ಸಜೀವ ದಹನ ಮಾಡಿದ ಘಟನೆ ಕರೌಲಿ ಜಿಲ್ಲೆಯಲ್ಲಿ ನಡೆದಿತ್ತು.

ಕಮಲ್ ಕಿಶೋರ್ ಮೃತ ದಲಿತ ಯುವಕನಾಗಿದ್ದು, ಆತನ ಸಹೋದರ ರೂಪ್ ಸಿಂಗ್ ಧನ್ಕಾ, ತನ್ನ ಸಹೋದರ ಉದ್ದೇಶಪೂರ್ವಕವಾಗಿ ಮಾಡಿದ ಅಗ್ನಿ ಅನಾಹುತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಕಮಲ್ ಕಿಶೋರ್ ಧನ್ಕಾ (23) ರಾಕೇಶ್ ಯಾದವ್ ಹಾಗೂ ಸುಭಾಷ್ ಚಂದ್ ಎಂಬುವವರು ಕುಂಪುರ್-ಭಗೇರಿ ರಸ್ತೆಯಲ್ಲಿ ನಡೆಸುತ್ತಿದ್ದ ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. 5  ತಿಂಗಳಿಂದ ತನಗೆ ಬರಬೇಕಿದ್ದ ಬಾಕಿ ವೇತನವನ್ನು ಕೇಳಿದಾಗಲೆಲ್ಲಾ ಮಾಲಿಕರು ಆತನಿಗೆ ಬೆದರಿಸಿ ಹಲ್ಲೆ ಮಾಡುತ್ತಿದ್ದದ್ದು ದೂರಿನ ಮೂಲಕ ಬಹಿರಂಗವಾಗಿದೆ. 

ಶನಿವಾರ ಮಧ್ಯಾಹ್ನ ಇಬ್ಬರೂ ಮಾಲಿಕರು ಕಮಲ್ ನ ಮನೆಗೆ ಬಂದು ಆತನನ್ನು ತಮ್ಮೊಂದಿಗೆ ಕರೆದೊಯ್ದರು, ಮರುದಿನವೇ ಮದ್ಯದ ಅಂಗಡಿಗೆ ಬೆಂಕಿಗೆ ಆಹುತಿಯಾಗಿದೆ ಎಂಬ ಸುದ್ದಿ ಬಂದಿತು. ಸ್ಥಳಕ್ಕೆ ಪೊಲೀಸರು ತೆರಳುವ ವೇಳೆಗೆ ಮದ್ಯದ ಅಂಗಡಿ ಹಾಗೂ ಅಂಗಡಿಯಲ್ಲಿ ಕಬ್ಬಿಣದ ಕಂಟೈನರ್ ನಲ್ಲಿದ್ದ ಕಮಲ್ ನ ದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು.

ಅಂಗಡಿ ಮಾಲಿಕರೇ ಉದ್ದೇಶಪೂರ್ವಕವಾಗಿ ಕಮಲ್ ನ್ನು ಅಂಗಡಿ ಸಹಿತ ಸುಟ್ಟು ಹಾಕಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ದೂರಿನ ಅನ್ವಯ ರಾಕೇಶ್ ಹಾಗೂ ಸುಭಾಷ್ ವಿರುದ್ಧ ಎಸ್ ಸಿ-ಎಸ್ ಟಿ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. 

SCROLL FOR NEXT