ದೇಶ

ಅಮೆರಿಕ ಜೊತೆ 2+2 ಮಾತುಕತೆ: ರಕ್ಷಣಾ ಮತ್ತು ಭದ್ರತೆ ಸಹಕಾರ ವೃದ್ಧಿಗೆ ಆದ್ಯತೆ

Sumana Upadhyaya

ನವದೆಹಲಿ: ರಕ್ಷಣಾ ಮತ್ತು ಭದ್ರತೆ ಬಾಂಧವ್ಯ ವೃದ್ಧಿಗೆ ಮತ್ತು ಇಂಡೊ-ಫೆಸಿಫಿಕ್ ನಲ್ಲಿ ಸಹಕಾರ ಕಾರ್ಯತಂತ್ರ ವೃದ್ಧಿಸಲು ಭಾರತ ಮತ್ತು ಅಮೆರಿಕ ಮಂಗಳವಾಗ ಉನ್ನತ ಮಟ್ಟದ ಮಾತುಕತೆಯನ್ನು ಆರಂಭಿಸಿದೆ. ಕೊರೋನಾ ವೈರಸ್ ಆತಂಕ ಮತ್ತು ಚೀನಾದೊಂದಿಗೆ ಗಡಿ ಸಂಘರ್ಷ ಮಧ್ಯೆಯೇ ಈ ಮಾತುಕತೆ ನಡೆಯುತ್ತಿರುವುದು ಭಾರತ ಮತ್ತು ಅಮೆರಿಕ ಎರಡೂ ದೇಶಗಳಿಗೆ ಮಹತ್ವವಾಗಿದೆ.

ಗಡಿಭಾಗದಲ್ಲಿ ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಚೀನಾ ಪ್ರಯತ್ನಿಸುತ್ತಿರುವ ಸಮಯದಲ್ಲಿ ಭಾರತ ಮತ್ತು ಅಮೆರಿಕದ ಈ ಉನ್ನತ ಮಟ್ಟದ ಮಾತುಕತೆ ಮುಖ್ಯವಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಇಂದು ಅಮೆರಿಕಾ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಅವರೊಂದಿಗೆ 2+2 ಮಾತುಕತೆಯ ಮೂರನೇ ಆವೃತ್ತಿಯಲ್ಲಿ ನಿರತರಾಗಿದ್ದಾರೆ.

ಚೀನಾದೊಂದಿಗೆ ಪೂರ್ವ ಲಡಾಕ್ ನಲ್ಲಿ ಸೇನಾ ನಿಯೋಜನೆ ಸಂದರ್ಭದಲ್ಲಿ ಈ ಮಾತುಕತೆ ನಡೆಯುತ್ತಿರುವುದು ಪ್ರಮುಖವಾಗಿದೆ. ಅಮೆರಿಕಾದ ಟ್ರಂಪ್ ಆಡಳಿತ ಕೂಡ ಬೀಜಿಂಗ್ ಜೊತೆಗೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯವನ್ನು ಹೊಂದಿದೆ. ವ್ಯಾಪಾರ ದರ ಸಮರ ಮತ್ತು ಚೀನಾದ ಜೊತೆ ಮಿಲಿಟರಿ ಸಂಬಂಧ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಮಾತುಕತೆ ಪ್ರಮುಖವಾಗಿದೆ.

ಕೊರೊನಾವೈರಸ್ ಸೋಂಕು ಹರಡುವಿಕೆಗೆ ಸಂಬಂಧ ಚೀನಾದ ವಿರುದ್ಧ ಅಮೆರಿಕಾ ಈಗಾಗಲೇ ಕೆರಳಿದೆ. ದಕ್ಷಿಣ ಸಮುದ್ರ ಗಡಿಯಲ್ಲಿ ಅಮೆರಿಕಾದ ಜೊತೆಗೆ ಹಾಗೂ ಲಡಾಖ್ ಪೂರ್ವ ಗಡಿಯಲ್ಲಿ ಭಾರತದ ಜೊತೆಗೆ ಚೀನಾ ತಂಟೆ ತೆಗೆಯುತ್ತಿದೆ. ಈ ಬಗ್ಗೆಯೂ ಇಂದಿನ ಸಭೆಯಲ್ಲಿ ಉಭಯ ರಾಷ್ಟ್ರಗಳ ನಾಯಕರು ಚರ್ಚಿಸುವ ಸಾಧ್ಯತೆಯಿದೆ.

ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ಸಾಮಾನ್ಯ ಅಂಶಗಳ ವಿನಿಮಯ ಮತ್ತು ಸಹಕಾರಿ ಒಪ್ಪಂದಕ್ಕೆ ಅಂಕಿತ ಹಾಕುವ ನಿರೀಕ್ಷೆಯಿದೆ. ಅಮೆರಿಕಾದ ಸ್ಯಾಟಲೈಟ್ ಗಳ ಮೂಲಕ ರಕ್ಷಣಾ ವಿಚಾರಕ್ಕೆ ಸಂಬಂಧಿಸಿದ ನಿಖರ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ಭಾರತಕ್ಕೆ ಇದರಿಂದ ಸಹಾಯವಾಗಲಿದೆ.

SCROLL FOR NEXT