ದೇಶ

ದೇಶದ ಪ್ರತಿಯೊಬ್ಬರಿಗೂ ‘ಲಸಿಕೆ’ ಪೂರೈಕೆ; ಪ್ರಧಾನಿ ಮೋದಿ ಭರವಸೆ

Srinivasamurthy VN

ನವದೆಹಲಿ: ದೇಶದಲ್ಲಿ ಕೊರೊನಾ ಲಸಿಕೆ ಲಭ್ಯವಾದ ನಂತರ ಎಲ್ಲರಿಗೂ ಲಸಿಕೆ ಪೂರೈಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಯಾರೊಬ್ಬರನ್ನೂ ಕಡೆಗಣಿಸದೆ ಎಲ್ಲರಿಗೂ ಲಸಿಕೆ ಪೂರೈಸಲಾಗುವುದು ಎಂದು ಅವರು ಘೋಷಿಸಿದ್ದಾರೆ. ರಾಷ್ಟ್ರೀಯ ಚಾನೆಲ್‌ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ಈ ವಿಷಯ ತಿಳಿಸಿದ್ದಾರೆ. ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ಜನರಿಗೆ ಉಚಿತ  ಲಸಿಕೆ ನೀಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಈ ಭರವಸೆಗೆ ಪ್ರತಿಪಕ್ಷಗಳು ಕೆಂಡಕಾರಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಈ ಹೇಳಿಕೆ ಮಹತ್ವ ಪಡದುಕೊಂಡಿದೆ. "ಲಸಿಕೆ ಲಭ್ಯವಾದ ತಕ್ಷಣ ... ನಾವು ಎಲ್ಲರಿಗೂ ಲಸಿಕೆ ಒದಗಿಸಲಿದ್ದೇವೆ. ಯಾರನ್ನೂ ಮರೆಯುವುದಿಲ್ಲ  ಕಡೆಗಣಿಸುವುದಿಲ್ಲ ಎಂಬ ಭರವಸೆ ನೀಡುತ್ತೇನೆ ಎಂದು ಮೋದಿ ಹೇಳಿದ್ದಾರೆ. 

ಆದರೆ, ಮೊದಲು ಕೊರೊನಾ ವಾರಿಯರ್ಸ್‌ ಲಸಿಕೆ ನೀಡಲು ಗಮನ ಹರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಲಸಿಕೆ ಪೂರೈಕೆ ಕಾರ್ಯದಲ್ಲಿ "ರಾಷ್ಟ್ರೀಯ ತಜ್ಞರ ತಂಡ" ರಚಿಸಲಾಗಿದ್ದು, ಅವರು ಆದ್ಯತೆಯನ್ನು ನಿರ್ಧರಿಸಲಿದ್ದಾರೆ ಎಂದು ಪ್ರಧಾನಿ ವಿವರಿಸಿದ್ದಾರೆ. ದೇಶದ ದೂರದ ಮೂಲೆಗಳಲ್ಲಿರುವವರಿಗೆ ಲಸಿಕೆ  ಲಭ್ಯವಾಗುವಂತೆ ಸಂಗ್ರಹಿಸಲು, 28,000 ಕೋಲ್ಡ್ ಚೈನ್ ಪಾಯಿಂಟ್‌ಗಳನ್ನು ಸ್ಥಾಪಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ರಾಜ್ಯ, ಜಿಲ್ಲಾ ಮತ್ತು ವಲಯ ಮಟ್ಟದಲ್ಲಿ ಸಮರ್ಪಿತ ಕಾರ್ಯಕರ್ತರ ತಂಡ, ತನ್ನ ಕಾರ್ಯವನ್ನು ಪಾರದರ್ಶಕ ಹಾಗೂ ಜವಾಬ್ದಾರಿಯುತ ರೀತಿಯಲ್ಲಿ ನಿರ್ವಹಿಸಲಿದೆ ಎಂದು ಹೇಳಿದರು. ಲಸಿಕೆ  ವಿತರಣೆಗೆ ಸಂಬಂಧಿಸಿದಂತೆ ತಜ್ಞರ ತಂಡ, ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಿದೆ. ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಖಾತರಿಪಡಿಸುವ ಕಾರ್ಯತಂತ್ರ ರೂಪಿಸುವಲ್ಲಿ ತಂಡ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ, ಸಹಕಾರ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.

SCROLL FOR NEXT