ದೇಶ

2 ದಿನಗಳ ಗುಜರಾತ್ ಭೇಟಿಗೆ ಪ್ರಧಾನಿ ಮೋದಿ ಆಗಮನ: ಮಾಜಿ ಸಿಎಂ ದಿವಂಗತ ಕೇಶುಬಾಯಿ ಪಟೇಲ್ ಕುಟುಂಬಸ್ಥರ ಭೇಟಿ

Sumana Upadhyaya

ಅಹಮದಾಬಾದ್: ಎರಡು ದಿನಗಳ ಗುಜರಾತ್ ಪ್ರವಾಸಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಅಹಮದಾಬಾದ್ ಗೆ ಆಗಮಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿಯವರನ್ನು ಮುಖ್ಯಮಂತ್ರಿ ವಿಜಯ್ ರೂಪಾಣಿ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ ಬರಮಾಡಿಕೊಂಡರು. ಕೊರೋನಾ ವೈರಸ್ ಹಾವಳಿ ದೇಶಕ್ಕೆ ಅಪ್ಪಳಿಸಿದ ನಂತರ ಮೋದಿಯವರು ಇದೇ ಮೊದಲ ಬಾರಿಗೆ ತಮ್ಮ ತವರು ನೆಲಕ್ಕೆ ಭೇಟಿ ನೀಡುತ್ತಿದ್ದಾರೆ.

ವಿಮಾನ ನಿಲ್ದಾಣದಿಂದ ನೇರವಾಗಿ ನಿನ್ನೆ ಮೃತಪಟ್ಟ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಕೇಶುಬಾಯಿ ಪಟೇಲ್ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಕೇಶುಬಾಯಿ ಪಟೇಲ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ನಂತರ ಇತ್ತೀಚೆಗೆ ನಿಧನರಾದ ಗುಜರಾತಿ ಸಿನೆಮಾ ಸೂಪರ್ ಸ್ಟಾರ್ ನರೇಶ್ ಕನೊಡಿಯಾ ಮತ್ತು ಅವರ ಸಂಗೀತ ನಿರ್ದೇಶಕ ಸೋದರ ಮಹೇಶ್ ಕನೊಡಿಯಾ ಕುಟುಂಬಸ್ಥರನ್ನು ಸಹ ಭೇಟಿ ಮಾಡಿ ಸಾಂತ್ವನ ಹೇಳಿದರು.

ನರೇಶ್ ಮತ್ತು ಮಹೇಶ್ ಕನೊಡಿಯಾ ಬಿಜೆಪಿಯ ಶಾಸಕ ಮತ್ತು ಸಂಸದರಾಗಿದ್ದರು. ಇನ್ನು ತಮ್ಮ ರಾಜ್ಯ ಭೇಟಿ ವೇಳೆ ಮೋದಿಯವರು ಗಾಂಧಿನಗರ ಹೊರವಲಯದಲ್ಲಿ ಸೋದರ ಪಂಕಜ್ ಮೋದಿಯವರೊಂದಿಗೆ ನೆಲೆಸಿರುವ ತಮ್ಮ ತಾಯಿ ಹಿರಬಾ ಅವರನ್ನು ಸಹ ಭೇಟಿ ಮಾಡಿ ಮೋದಿಯವರು ಯೋಗಕ್ಷೇಮ ವಿಚಾರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಧಾನಿಯವರ ಇಂದಿನ ಕಾರ್ಯಕ್ರಮದಲ್ಲಿ ನರ್ಮದಾ ಜಿಲ್ಲೆಯ ಕೆವಡಿಯಾ ಏಕತೆ ಪ್ರತಿಮೆ ಬಳಿ ಹಲವು ಪ್ರವಾಸೋದ್ಯಮ ಯೋಜನೆಗಳ ಉದ್ಘಾಟನೆ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಸ್ಮಾರಕ ಲೋಕಾರ್ಪಣೆ ಸಹ ಮಾಡಲಿದ್ದಾರೆ.

ನಾಳೆ ಪ್ರಧಾನಿ, ಕೆವಾಡಿಯಾವನ್ನು ಅಹಮದಾಬಾದ್‌ನೊಂದಿಗೆ ಸಂಪರ್ಕಿಸುವ ಸೀಪ್ಲೇನ್ ಸೇವೆಯನ್ನು ಸಹ ಉದ್ಘಾಟಿಸಲಿದ್ದಾರೆ.

SCROLL FOR NEXT