ಪಾಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ಮಾಂಜಿ ಅವರ ನೇತೃತ್ವದ ಹ್ಯಾಮ್ ಪಕ್ಷ ಎನ್ ಡಿಎ ಒಕ್ಕೂಡ ಸೇರ್ಪಡೆಯಾಗಲಿದೆ ಎಂದು ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಮಾಂಜಿ ಈ ಸಂಬಂಧ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಪಕ್ಷದ ವಕ್ತಾರ ಡ್ಯಾನಿಶ್ ರಿಜ್ವಾನ್ ಹೇಳಿದ್ದಾರೆ.ದಿ ಹಿಂದೂಸ್ತಾನ್ ಆವಮ್ ಮೋರ್ಚಾ ಯಾವುದೇ ಪಕ್ಷದ ಜೊತೆ ವಿಲೀನವಾಗುವುದಿಲ್ಲ, ಬದಲಿಗೆ ಎನ್ ಡಿಎ ಒಕ್ಕೂಟದ ಒಂದು ಭಾಗವಾಗಲಿದೆ ಎಂದು ಹೇಳಿದ್ದಾರೆ.
ಅಕ್ಟೋಬರ್ -ನವೆಂಬರ್ ನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ಜಿತನ್ ಮಾಂಜಿ ಪಕ್ಷ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.
ಜಿತನ್ ರಾಮ್ ಮಾಂಜಿ ಒಂದು ಕಾಲದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಟು ವಿಮರ್ಶಕರಾಗಿದ್ದರು. ರಾಜ್ಯ ಸರ್ಕಾರದ ಕಾರ್ಯ ವೈಖರಿಯನ್ನು ಸಾಕಷ್ಟು ಭಾರಿ ಟೀಕೆಗೆ ಒಳಪಡಿಸಿದ್ದರು. ಆದರೆ. ಇತ್ತೀಚೆಗೆ ಅವರು ರಾಜ್ಯ ಸರ್ಕಾರ ತೆಗೆದುಕೊಂಡ ವಿಭಿನ್ನ ನಿರ್ಧಾರಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಆಗಲೇ ಮಾಂಜಿ ಜೆಡಿಯು ಜೊತೆಗೆ
ಕೈಜೋಡಿಸುವ ಅನುಮಾನ ರಾಷ್ಟ್ರ ಮಟ್ಟದಲ್ಲಿ ವ್ಯಕ್ತವಾಗಿತ್ತು. ಆದರೆ, ಈ ಅನುಮಾನ ಇದೀಗ ನಿಜವಾಗಿದೆ.
ಅಲ್ಲದೆ, ಮಾಂಜಿ ನೇತೃತ್ವದ ಹಿಂದೂಸ್ತಾನಿ ಅವಂ ಮೋರ್ಚಾ ಪಕ್ಷವು ಮಹಾಮೈತ್ರಿಯ ಭಾಗವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದರೆ, ಎನ್‌ಡಿಎ ಮೈತ್ರಿಕೂಟದ ಎದುರು ಹೀನಾಯವಾಗಿ ಸೋತಿತು. ಹಾಗಾಗಿ ಮಾಂಜಿ ಕಳೆದ ಎರಡು ತಿಂಗಳುಗಳಲ್ಲಿ ಒವೈಸಿ ನೇತೃತ್ವದ-ಎಐಐಎಂಐಎಂ ಸೇರಿದಂತೆ ವಿವಿಧ ಪಕ್ಷಗಳೊಂದಿಗೆ ಮೈತ್ರಿಯ ಆಯ್ಕೆಗಳನ್ನು ಹುಡುಕುತ್ತಿದ್ದರು.