ದೇಶ

ದೇಶದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ: ಅಮೆರಿಕಾವನ್ನು ಹಿಂದಿಕ್ಕಿದ ಭಾರತ, ಒಂದೇ ದಿನ ದಾಖಲೆಯ 83,883 ಮಂದಿಯಲ್ಲಿ ಸೋಂಕು ಪತ್ತೆ!

Manjula VN

ನವದೆಹಲಿ: ಮಾರಕ ಕೊರೋನಾ ವೈರಸ್‌ ಹೆಮ್ಮಾರಿ ಭಾರತದಲ್ಲಿ ತನ್ನ ರೌದ್ರನರ್ತನವನ್ನು ಮುಂದುವರಿಸಿದ್ದು, ಗುರುವಾರ ವಿಶ್ವ ದಾಖಲೆ ಬರೆದಿದೆ. ಒಂದೇ ದಿನ ದೇಶದಲ್ಲಿ ದಾಖಲೆಯ 83,883 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದು ಕೊರೋನಾ ವೈರಸ್‌ ಆರಂಭವಾದ ಬಳಿಕ ಜಗತ್ತಿನ ಯಾವುದೇ ದೇಶದಲ್ಲಿ ದಾಖಲಾದ ದೈನಂದಿನ ಅತಿ ಗರಿಷ್ಠ ಸಂಖ್ಯೆಯ ಸೋಂಕು ಎನಿಸಿಕೊಂಡಿದೆ.

ವಿಶ್ವದ ಯಾವುದೇ ದೇಶದಲ್ಲಿ ಒಂದೇ ದಿನ 83 ಸಾವಿರ ಪ್ರಕರಣಗಳು ದಾಖಲಾದ ನಿದರ್ಶನ ಇಲ್ಲ. ಅಮೆರಿಕದಲ್ಲಿ ಜು.24ರಂದು 78,586 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ವಿಶ್ವದಲ್ಲೇ ಅತಿ ಗರಿಷ್ಠ ಎನಿಸಿಕೊಂಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಬ್ರೆಜಿಲ್‌ಗಿಂತಲೂ ಹೆಚ್ಚಿನ ಸೊಂಕು ಭಾರತದಲ್ಲೇ ದಾಖಲಾಗುತ್ತಿದೆ. 

ದೇಶದಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಮೂರನೇ ಬಾರಿ 80 ಸಾವಿರಕ್ಕಿಂತ ಅಧಿಕ ಪ್ರಕರಣಗಳು ಒಂದೇ ದಿನ ದೃಢಪಟ್ಟಿರುವುದು, ಸೋಂಕಿನ ತೀವ್ರತೆಗೆ ಹಿಡಿದ ಕನ್ನಡಿಯಾಗಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ ದಾಖಲೆಯ 83,883 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 38,53,407ಕ್ಕೆ ಏರಿಕೆಯಾಗಿದೆ. ಅಲ್ಲದೆ, ಒಂದೇ ದಿನ 1043 ಮಂದಿ ಸಾವನ್ನಪ್ಪಿದ್ದು, ಮಹಾಮಾರಿ ವೈರಸ್ ಈ ವರೆಗೂ ದೇಶದಲ್ಲಿ ಒಟ್ಟು 67,376 ಮಂದಿಯನ್ನು ಬಲಿಪಡೆದುಕೊಂಡಿದೆ ಎಂದು ತಿಳಿದುಬಂದಿದೆ. 

ಇನ್ನು 38,53,407ಕ್ಕೆ ಮಂದಿ ಸೋಂಕಿತರ ಪೈಕಿ ದೇಶದಲ್ಲಿ 29,70,493 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿನ್ನೂ 8,15,538 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ದೇಶದಲ್ಲಿ ಒಂದೇ ದಿನ 17 ಸಾವಿರ ಪ್ರಕರಣಗಳು ದಾಖಲಾದ ಏಕೈಕ ರಾಜ್ಯವಾಗಿ ಮಹಾರಾಷ್ಟ್ರ ಬುಧವಾರ ದಾಖಲೆಗೆ ಸೇರಿದ್ದು, ಒಟ್ಟು 17433 ಪ್ರಕರಣಗಳು ಇಲ್ಲಿ ದೃಢಪಟ್ಟಿವೆ. ಆಗಸ್ಟ್ 29ರಂದು ಮಹಾರಾಷ್ಟ್ರದಲ್ಲಿ ಇದೂವರೆಗಿನ ಗರಿಷ್ಠ ಅಂದರೆ 16867 ಪ್ರಕರಣಗಳು ಕಾಣಿಸಿಕೊಂಡಿದ್ದವು. ರಾಜ್ಯದಲ್ಲಿ ಬುಧವಾರ 292 ಮಂದಿ ಸೋಂಕಿಗೆ ಬಲಿಯಾಗಿದ್ದು, ಸೋಂಕಿನ ಕಾರಣದಿಂದ ಮೃತಪಟ್ಟವರ ಸಂಖ್ಯೆ 25,195ಕ್ಕೇರಿದೆ

SCROLL FOR NEXT