ದೇಶ

ಕರ್ನಾಟಕ ಮತ್ತು ದೆಹಲಿಯಲ್ಲಿ ಕೋವಿಡ್-19 ಸಾವು ಪ್ರಕರಣಗಳು ಅಧಿಕ:ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ

Sumana Upadhyaya

ನವದೆಹಲಿ: ದೇಶಾದ್ಯಂತ ಕೊರೋನಾ ವೈರಸ್ ನಿಂದ ಗುಣಮುಖ ಹೊಂದುತ್ತಿರುವವರ ಸಂಖ್ಯೆ ಸೋಂಕಿತರ ಸಂಖ್ಯೆಗಿಂತ ಹೆಚ್ಚಾಗಿದೆ. ಗುಣಮುಖ ಹೊಂದುತ್ತಿರುವವರ ಸಂಖ್ಯೆ 29.70 ಲಕ್ಷವಿದ್ದು ಅದು ಕೊರೋನಾ ಸಕ್ರಿಯ ಕೇಸುಗಳಿಗಿಂತ 3.5ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11 ಲಕ್ಷಕ್ಕೂ ಅಧಿಕ ಕೋವಿಡ್-19 ಪರೀಕ್ಷೆ ಮಾಡಿಸಲಾಗಿದ್ದು ನಿನ್ನೆ ಅತಿ ಹೆಚ್ಚು ಅಂದರೆ 68 ಸಾವಿರದ 584 ಮಂದಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ, ತಮಿಳು ನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ ದೇಶದ ಒಟ್ಟು ಕೊರೋನಾ ಸಕ್ರಿಯ ಕೇಸುಗಳಲ್ಲಿ ಶೇಕಡಾ 62ರಷ್ಟು ಈ ಐದು ರಾಜ್ಯಗಳಲ್ಲಿದ್ದಾರೆ. ಕೋವಿಡ್-19ನಿಂದ ಮೃತಪಟ್ಟವರಲ್ಲಿ ಶೇಕಡಾ 70ರಷ್ಟು ಮಂದಿ ಕರ್ನಾಟಕ, ಆಂಧ್ರ ಪ್ರದೇಶ, ದೆಹಲಿ, ತಮಿಳು ನಾಡು ಮತ್ತು ಮಹಾರಾಷ್ಟ್ರ ರಾಜ್ಯದವರಾಗಿದ್ದಾರೆ ಎಂದು ವಿವರಿಸಿದರು.

ವಾರದ ಲೆಕ್ಕಾಚಾರ ನೋಡುವುದಾದರೆ ಸಕ್ರಿಯ ಕೊರೋನಾ ಕೇಸುಗಳಲ್ಲಿ ಕರ್ನಾಟಕದಲ್ಲಿ ಶೇಕಡಾ 16.1ರಷ್ಟು ಕಡಿಮೆಯಾಗಿದ್ದು, ಆಂಧ್ರ ಪ್ರದೇಶದಲ್ಲಿ ಶೇಕಡಾ 13.7ರಷ್ಟು, ಮಹಾರಾಷ್ಟ್ರದಲ್ಲಿ ಶೇಕಡಾ 6.8ರಷ್ಟು, ತಮಿಳು ನಾಡಿನಲ್ಲಿ ಶೇಕಡಾ 23.9ರಷ್ಟು, ಉತ್ತರ ಪ್ರದೇಶದಲ್ಲಿ ಶೇಕಡಾ 17.1ರಷ್ಟು ಕಡಿಮೆಯಾಗಿವೆ. ಕೊರೋನಾ ಸೋಂಕಿತರು ಮೃತಪಟ್ಟವವರ ಲೆಕ್ಕಾಚಾರ ನೋಡುವುದಾದರೆ ವಾರದಲ್ಲಿ ಶೇಕಡಾ 4.5ರಷ್ಟು ಆಂಧ್ರ ಪ್ರದೇಶದಲ್ಲಿ, ಶೇಕಡಾ 11.5ರಷ್ಟು ಮಹಾರಾಷ್ಟ್ರದಲ್ಲಿ, ಶೇಕಡಾ 18.2ರಷ್ಟು ತಮಿಳು ನಾಡಿನಲ್ಲಿ ಕಡಿಮೆಯಾಗಿದೆ.

ಆದರೆ ಕರ್ನಾಟಕ ಮತ್ತು ದೆಹಲಿಯಲ್ಲಿ ಕೊರೋನಾದಿಂದ ಪ್ರತಿದಿನ ಮೃತಪಡುವವರ ಸಂಖ್ಯೆ ಸರಾಸರಿ ಹೆಚ್ಚಾಗಿದೆ. ದೆಹಲಿಯಲ್ಲಿ ಶೇಕಡಾ 50ರಷ್ಟು ಮತ್ತು ಕರ್ನಾಟಕದಲ್ಲಿ ಶೇಕಡಾ 9.6ರಷ್ಟು ಹೆಚ್ಚಾಗಿದೆ ಎಂದು ವಿವರಣೆ ನೀಡಿದರು.

ಪ್ರಪಂಚದ ಬೇರೆ ದೇಶಗಳಿಗೆ ಹೋಲಿಸಿದರೆ ಪ್ರತಿ 10 ಲಕ್ಷಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ನಮ್ಮ ದೇಶದಲ್ಲಿ ಕಡಿಮೆಯಾಗಿದೆ. ಪ್ರತಿ ದಶಲಕ್ಷಕ್ಕೆ ಸಾಯುವವರ ಸಂಖ್ಯೆ ಕೂಡ ಕಡಿಮೆಯಿದೆ. ಭಾರತದಲ್ಲಿ ಪ್ರತಿ 10 ಲಕ್ಷಕ್ಕೆ 49 ಮಂದಿ ಸಾಯುತ್ತಿದ್ದಾರೆ. 

ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಪ್ರತಿದಿನ ಕೊರೋನಾ ಪಾಸಿಟಿವ್ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರವು ಆರ್ಥಿಕತೆಯನ್ನು ತೆರೆಯುವ, ಸಮರ್ಪಕ ಪರೀಕ್ಷಾ ಸಾಮರ್ಥ್ಯಗಳಿಗೆ, ಕೊರೋನಾ ಸೋಂಕಿತರ ಚಿಕಿತ್ಸೆಗೆ ಸ್ಪಷ್ಟ ಮಾರ್ಗಸೂಚಿಗಳು ಮತ್ತು ಆಸ್ಪತ್ರೆಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ವಿಧಾನವನ್ನು ಅಳವಡಿಸಿಕೊಂಡಿದೆ ಎಂದರು.

ಲಾಕ್ ಡೌನ್ ಸಡಿಲಿಕೆಯೆಂದು ಕೊರೋನಾ ನಿರ್ಲಕ್ಷ್ಯ ಬೇಡ: ಜನರಿಗೆ ಸಹಾಯವಾಗಲು, ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಸರ್ಕಾರ ಕೊರೋನಾ ಲಾಕ್ ಡೌನ್ ನಿಯಮ ಸಡಿಲಿಕೆ ಮಾಡಿದ್ದು ಹಾಗೆಂದು ಜನರು ಮೈಮರೆಯಬಾರದು. ಗುಂಪಿನಲ್ಲಿ ಏನೇ ಚಟುವಟಿಕೆ ನಡೆಸುವುದಿದ್ದರೂ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು.

SCROLL FOR NEXT