ದೇಶ

ದೇಶದಲ್ಲಿ ಮತ್ತೆ ಕೊರೋನಾ ಸ್ಫೋಟ: ಒಂದೇ ದಿನ 83,341 ಕೇಸ್ ಪತ್ತೆ, ಬ್ರೆಜಿಲ್ ಹಿಂದಿಕ್ಕಿ 2ನೇ ಸ್ಥಾನಕ್ಕೇರುವತ್ತ ಭಾರತ ಹೆಜ್ಜೆ

Manjula VN

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಮತ್ತೊಮ್ಮೆ ದಾಖಲೆಯ ಏರಿಕೆ ಕಂಡಿವೆ. ಶುಕ್ರವಾರ ಒಂದೇ ದಿನ 83,341 ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾಪೀಡಿತರ ಸಂಖ್ಯೆ 39 ಲಕ್ಷ ಗಡಿದಾಟಿದೆ. ಈ ಮೂಲಕ ಭಾರತ ಅತೀ ಹೆಚ್ಚು ಕೊರೋನಾ ವೈರಸ್ ಪ್ರಕರಣ ದಾಖಲಾದ ದೇಶಗಳ ಪೈಕಿ 2ನೇ ಸ್ಥಾನದಲ್ಲಿರುವ ಬ್ರೆಜಿಲ್ (40.01ಲಕ್ಷ ಕೇಸ್) ಅನ್ನು ಹಿಂದಿಕ್ಕುವ ಸನಿಹದಲ್ಲಿದೆ. 

62.90 ಲಕ್ಷ ಸೋಂಕಿತರೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದೆ. 24 ಗಂಟೆಗಳಲ್ಲಿ 83,341 ಮಂದಿಯಲ್ಲಿ ವೈರಸ್ ಪತ್ತೆಯಾಗುವುದರೊಂದಿಗೆ ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 39,36,748ಕ್ಕೆ ಏರಿಕೆಯಾಗಿದೆ. 

ಇನ್ನು ಒಂದೇ ದಿನ 1,096 ಮಂದಿ ಸಾವನ್ನಪ್ಪಿದ್ದು, ಮಹಾಮಾರಿ ಕೊರೋನಾ ಈ ವರೆಗೂ ದೇಶದಲ್ಲಿ ಒಟ್ಟು 68,472 ಮಂದಿಯನ್ನು ಬಲಿ ಪಡೆದುಕೊಂಡಿದೆ. ಕಳೆದ 4 ದಿನಗಳಿಂದ ನಿರಂತರವಾಗಿ ಸಾವಿರಕ್ಕೂ ಅಧಿಕ ಕೊರೋನಾ ಸಾವುಗಳು ದಾಖಲಾಗುತ್ತಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ. 

ಇನ್ನು 39,36,748 ಮಂದಿ ಸೋಂಕಿತರ ಪೈಕಿ 30,37,152 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 8,31,124 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ದೇಶದ ಶೇ.70ರಷ್ಟು ಕೊರೋನಾ ಪ್ರಕರಣಗಳು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ ಮತ್ತು ತಮಿಳುನಾಡು ಈ ಐದು ರಾಜ್ಯಗಳಲ್ಲಿಯೇ ದಾಖಲಾಗಿವೆ. 

ದೇಶದಲ್ಲಿ ವರದಿಯಾಗಿರುವ ಶೇ.70ರಷ್ಟು ಸಾವುಗಳು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಮತ್ತು ಆಂಧ್ರಪ್ರದೇಶಗಳದ್ದಾಗಿವೆ ಎಂಬ ಆತಂಕಕಾರಿ ವಿಚಾರ ಕೇಂದ್ರ ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ. 

SCROLL FOR NEXT