ದೇಶ

ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 65 ಲಕ್ಷ ತಲುಪಬಹುದು: ಕೇಂದ್ರದ ವಿರುದ್ದ ಚಿದಂಬರಂ ದಾಳಿ ಕಿಡಿ

Manjula VN

ನವದೆಹಲಿ: ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 65 ಲಕ್ಷ ತಲುಪಬಹುದು ಎಂದು ಕೊರೋನಾ ಪರಿಸ್ಥಿತಿ ನಿರ್ವಹಣೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸೆಪ್ಟೆಂಬರ್ 30ರೊಳಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 55 ಲಕ್ಷ ತಲುಪಬಹುದು ಎಂದು ಊಹಿಸಿದ್ದೆ. ಆದರೆ, ನನ್ನ ಊಹೆ ತಪ್ಪಾಗಿದೆ. ಸೆಪ್ಟೆಂಬರ್ 20ರೊಳಗೆ ಅಥವಾ ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 65 ಲಕ್ಷ ತಲುಪಲಿದೆ ಎಂದು ಹೇಳಿದ್ದಾರೆ. 

ಕೊರೋನಾ ನಿಯಂತ್ರಿಸಲು ಲಾಕ್‌ಡೌನ್ ಕಾರ್ಯತಂತ್ರದ ಲಾಭವನ್ನು ಪಡೆಯದ ಏಕೈಕ ದೇಶವೆಂದರೆ ಅದು ಭಾರತವಾಗಿದೆ. 21 ದಿನಗಳಲ್ಲಿ ನಾವು ಕೊರೋನಾವೈರಸ್'ನ್ನು ಹಿಮ್ಮೆಟ್ಟಿಸುತ್ತೇವೆಂದು ಪ್ರಧಾನಿ ಮೋದಿ ಭರವಸೆ ನೀಡಿದ್ದರು, ಇತರ ದೇಶಗಳು ಯಶಸ್ವಿಯಾಗುತ್ತಿರುವ ಈ ಸಂದರ್ಭದಲ್ಲಿ ಭಾರತ ಏಕೆ ವಿಫಲವಾಗಿದೆ ಎಂಬುದಕ್ಕೆ ಮೋದಿ ಉತ್ತರಿಸಬೇಕು ಎಂದು ತಿಳಿಸಿದ್ದಾರೆ. 

ದೇಶದಲ್ಲಿ ದಿನೇದಿನೇ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು, ಶನಿವಾರ ಸಾರ್ವಕಾಲಿಕ ದಾಖಲೆಯ 86,432 ಸೋಂಕಿತರು ಪತ್ತೆಯಾಗಿದ್ದಾರೆ. ಇದು ಕೊರೋನಾ ತವರು ಚೀನಾದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ದಾಖಲಾದ (85, 102) ಪ್ರಕರಣಗಳಿಂತಲೂ ಹೆಚ್ಚು ಎನ್ನುವುದು ಗಮನಾರ್ಹ ವಿಚಾರವಾಗಿದೆ. 

ದೇಶದಲ್ಲಿ ಒಂದೇ ದಿನ 86,432 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಳ್ಳುವ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 40 ಲಕ್ಷ ಗಡಿ ದಾಟಿ 40,23,179ಕ್ಕೆ ತಲುಪಿದೆ. 

ಇನ್ನು 40,23,179 ಲಕ್ಷ ಪ್ರಕರಣಗಳೊಂದಿಗೆ ವಿಶ್ವದಲ್ಲಿ 2ನೇ ಸ್ಥಾನದಲ್ಲಿರುವ ಬ್ರೆಜಿಲ್ ರಾಷ್ಟ್ರವನ್ನು ಭಾರತ ಶೀಘ್ರದಲ್ಲೇ ಹಿಂದಿಕ್ಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

SCROLL FOR NEXT