ದೇಶ

ಗಣೇಶೋತ್ಸವ ಆಚರಣೆ ತಂದ ಆಪತ್ತು: ಒಂದೇ ಕುಟುಂಬದ 30 ಮಂದಿಗೆ ಒಕ್ಕರಿಸಿದ ಕೊರೋನಾ ಸೋಂಕು!

Srinivasamurthy VN

ಥಾಣೆ: ಗಣೇಶೋತ್ಸವ ಆಚರಣೆಗಾಗಿ ಒಂದೆಡೆ ಸೇರಿದ್ದ ಒಂದೇ ಕುಟುಂಬದ 30 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

ಹೌದು... ಮಾರಕ ಕೊರೋನಾ ವೈರಸ್ ಅಬ್ಬರ ದೇಶದಲ್ಲಿ ಜೋರಾಗಿದ್ದು, ಕೊಂಚ ಮೈ ಮರೆತರೂ ಸೋಂಕು ಒಕ್ಕರಿಸುವುದಂತೂ ಖಚಿತ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಗಣೇಶೋತ್ಸವ ಆಚರಣೆಗಾಗಿ ಒಂದೆಡೆ ಸೇರಿದ್ದ ಒಂದೇ ಕುಟುಂಬದ 30 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿರುವ  ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ಥಾಣೆ ಕಲ್ಯಾಣ್ ನಲ್ಲಿನ ಜೋಷಿ ಭಾಗ್ ಪ್ರದೇಶದಲ್ಲಿ ಕಳೆದ ಆಗಸ್ಟ್ 22 ರಿಂದ 31ರ ವರೆಗೆ ಗಣೇಶೋತ್ಸವ ಆಚರಣೆ ಮಾಡಲಾಗಿತ್ತು. ಬಹುಮಹಡಿ ಕಟ್ಟಡದ ವಿವಿಧ ಫ್ಲೋರ್ ಗಳಲ್ಲಿ ಕುಟುಂಬಸ್ಥರು ನೆಲೆಸಿದ್ದರು. ಆದರೆ ಹಬ್ಬದ ನಿಮಿತ್ತ ಎಲ್ಲರೂ ಒಗ್ಗೂಡಿ ಹಬ್ಬದ  ಆಚರಣೆ ಮಾಡಿದ್ದರು.ಈ ಕುಟುಂಬ ಕಳೆದ 60 ವರ್ಷಗಳಿಂದಲೂ ಇದೇ ರೀತಿ ಒಗ್ಗೂಡಿ ಗಣೇಶೋತ್ಸವ ಆಚರಿಸಿಕೊಂಡು ಬಂದಿತ್ತು. ಆದರೆ ಈ ಬಾರಿ ಕುಟುಂಬದ ಎಲ್ಲರಿಗೂ ಕೊರೋನಾ ಸೋಂಕು ಒಕ್ಕರಿಸಿದೆ ಎಂದುಸ ಆರೋಗ್ಯಾಧಿಕಾರಿ ಪ್ರತಿಭಾ ಪಾನ್ಪತಿ ಹೇಳಿದ್ದಾರೆ.

ಗಣೇಶೋತ್ಸವ ಆಚರಣೆ ಬಳಿಕ ಈ ಕುಟುಂಬದ ಓರ್ವ ಸದಸ್ಯನಿಗೆ ಮೊದಲು ಸೋಂಕಿನ ಲಕ್ಷಣಗಳು ಗೋಚರಿಸಿತ್ತು. ಪರೀಕ್ಷೆ ವೇಳೆ ಅದು ದೃಢವಾಗಿತ್ತು. ಬಳಿಕ ಕುಟುಂಬದ ಎಲ್ಲ 33 ಸದಸ್ಯರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ 30 ಮಂದಿಯಲ್ಲಿ ಸೋಂಕಿರುವುದು ಪತ್ತೆಯಾಗಿದೆ. ಪ್ರಸ್ತುತ ಎಲ್ಲರನ್ನೂ  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

SCROLL FOR NEXT