ದೇಶ

ಅಹಮದಾಬಾದನ್ನು ಮಿನಿ ಪಾಕಿಸ್ತಾನಕ್ಕೆ ಹೋಲಿಸಿರುವ ಸಂಜಯ್ ರಾವತ್ ಗುಜರಾತೀಯರ ಕ್ಷಮೆ ಕೇಳಬೇಕು:ಬಿಜೆಪಿ

Sumana Upadhyaya

ಅಹಮದಾಬಾದ್: ಸಂಜಯ್ ರಾವತ್-ಕಂಗನಾ ರಾನಾವತ್ ಆರೋಪ-ಪ್ರತ್ಯಾರೋಪ ರಾಜಕೀಯ ನಾಯಕರ ಮಟ್ಟಿಗೆ ಹೋಗಿದೆ. ಅಹಮದಾಬಾದನ್ನು ಮಿನಿ ಪಾಕಿಸ್ತಾನ ಎಂದು ಕರೆದಿರುವ ಶಿವಸೇನಾ ಸಂಸದ ಸಂಜಯ್ ರಾವತ್ ಗುಜರಾತ್ ರಾಜ್ಯದ ಹೆಸರಿಗೆ ಕಳಂಕ ತರಲು ಹೊರಟಿದ್ದಾರೆ, ಹೀಗಾಗಿ ಗುಜರಾತಿಗರ ಕ್ಷಮೆಯನ್ನು ಅವರು ಕೇಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ನಿನ್ನೆ ಮುಂಬೈಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಸಂಸದ ಸಂಜಯ್ ರಾವತ್, ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಹೋಲಿಸುವ ಬಾಲಿವುಡ್  ನಟಿ ಕಂಗನಾ ರಾನಾವತ್ ಅವರಿಗೆ ಅಹಮದಾಬಾದನ್ನು ಮಿನಿ ಪಾಕಿಸ್ತಾನ ಎಂದು ಕರೆಯಲು ಧೈರ್ಯವಿದೆಯೇ ಎಂದು ಕೇಳಿದ್ದರು. ಮುಂಬೈ ನಗರ ಅಸುರಕ್ಷಿತವಾಗಿದೆ ಎಂದು ಕಂಗನಾ ಆರೋಪಿಸಿದ ನಂತರ ಅವರು ಮತ್ತು ಸಂಜಯ್ ರಾವತ್ ಪರಸ್ಪರ ಮಾತಿನ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ಸಂಜಯ್ ರಾವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗುಜರಾತ್ ಬಿಜೆಪಿ ವಕ್ತಾರ ಭರತ್ ಪಾಂಡ್ಯ, ಅಹಮದಾಬಾದನ್ನು ಮಿನಿ ಪಾಕಿಸ್ತಾನ ಎಂದು ಕರೆದು ಶಿವಸೇನಾ ನಾಯಕ ಸಂಜಯ್ ರಾವತ್ ರಾಜ್ಯಕ್ಕೆ, ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ಅವರು ಗುಜರಾತೀಯರು ಮತ್ತು ಅಹಮದಾಬಾದೀಯರ ಕ್ಷಮೆ ಕೇಳಬೇಕು ಎಂದಿದ್ದಾರೆ.

ಗುಜರಾತ್ ಗಾಂಧಿ, ಸರ್ದಾರ್ ಪಟೇಲ್ ರಂಥವರು ಹುಟ್ಟಿದ ನಾಡು. ಭಾರತವನ್ನು ಐಕ್ಯತೆ ಮತ್ತು ಏಕತೆಯ ಮೂಲಕ ಗಟ್ಟಿಗೊಳಿಸಿದವರು ಪಟೇಲರು. ಅವರಿಂದಾಗಿಯೇ ಜುನಾಗಡ್ ಮತ್ತು ಹೈದರಾಬಾದ್ ಪಾಕಿಸ್ತಾನ ಪಾಲಾಗುವುದು ತಪ್ಪಿಹೋಗಿ ಭಾರತದಲ್ಲಿಯೇ ಉಳಿದುಕೊಂಡಿತು, ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಬೇಕು ಎಂಬುದು ಅವರ ಕನಸಾಗಿತ್ತು, ಸಂವಿಧಾನ ವಿಧಿ 370ನ್ನು ತೆಗೆದುಹಾಕಿ ಅದನ್ನು ಪ್ರಧಾನಿ ಮೋದಿ ಈಡೇರಿಸಿದ್ದಾರೆ. ಹೀಗಾಗಿ ಭಾರತದ ಸಮಗ್ರತೆ, ಐಕ್ಯತೆಗೆ ಗುಜರಾತ್ ನ ಕಾಣಿಕೆ ಸಾಕಷ್ಟಿದೆ. ಅದನ್ನು ಯಾವತ್ತಿಗೂ ಮರೆಯಬಾರದು ಎಂದು ಭರತ್ ಪಾಂಡ್ಯ ಹೇಳಿದ್ದಾರೆ.

SCROLL FOR NEXT