ದೇಶ

ಬರ್ದ್ವಾನ್‌ ಸ್ಫೋಟ ಪ್ರಕರಣ: ಬಾಂಗ್ಲಾದೇಶದ 4 ಜಮಾತ್-ಉಲ್-ಮುಜಾಹಿದ್ದೀನ್ ಉಗ್ರರಿಗೆ 7 ವರ್ಷ ಕಠಿಣ ಕಾರಾಗೃಹ ಸಜೆ ಶಿಕ್ಷೆ

Srinivasamurthy VN

ಕೋಲ್ಕತಾ: 2014ರ ಬರ್ದ್ವಾನ್‌ ಸ್ಫೋಟ ಪ‍್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ನಾಲ್ವರು ಜಮಾತ್-ಉಲ್-ಮುಜಾಹಿದ್ದೀನ್ ಉಗ್ರರಿಗೆ ಎನ್ ಐಎ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಸಜೆ ಶಿಕ್ಷೆ ವಿಧಿಸಿದೆ.

ನಿನ್ನೆ ಕೋಲ್ಕತಾದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆಯ ನ್ಯಾಯಲಯದಲ್ಲಿ ನಡೆದ ವಿಚಾರಣೆಯಲ್ಲಿ ಕೋರ್ಟ್ ಈ ಶಿಕ್ಷೆ ವಿಧಿಸಿದ್ದು, 4 ಜಮಾತ್-ಉಲ್-ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಬಾಂಗ್ಲಾದೇಶ ಮೂಲದ ನಾಲ್ವರಿಗೆ ಶಿಕ್ಷೆ ಪ್ರಮಾಣ ಘೋಷಣೆ ಮಾಡಿದೆ. ಈ ಹಿಂದೆ ಎಲ್ಲ ನಾಲ್ಕೂ ಅಪರಾಧಿಗಳು  ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರಿಂದ ನ್ಯಾಯಾಲಯ ನಾಲ್ಕು ಮಂದಿಗೆ 7 ವರ್ಷ ಕಠಿಣ ಕಾರಾಗೃಹ ಸಜೆ ಶಿಕ್ಷೆ ವಿಧಿಸಿದೆ ಎನ್ನಲಾಗಿದೆ.

ಪಶ್ಚಿಮ ಬಂಗಾಳದ ಬರ್ದ್ವಾನ್‌ ಜಿಲ್ಲೆಯ ಮನೆಯೊಂದರಲ್ಲಿ 2014 ಅಕ್ಟೋಬರ್‌ 2ರಂದು ಸುಧಾರಿತ ಸ್ಫೋಟಕಗಳನ್ನು(ಐಇಡಿ) ತಯಾರಿಸುತ್ತಿದ್ದ ವೇಳೆ, ಆಕಸ್ಮಿಕವಾಗಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆ ಜಮ್ಮತ್‌ ಉಲ್‌ ಮುಜಾಹಿದ್ದೀನ್‌  (ಜೆಎಂಬಿ) ಮನೆಯೊಂದನ್ನು ಬಾಡಿಗೆ ಪಡೆದು, ಇದನ್ನು ಬುರ್ಖಾ ತಯಾರಿ ಕಾರ್ಖಾನೆ ಎಂದು ಬಿಂಬಿಸಲಾಗಿತ್ತು. ಸ್ಫೋಟದ ಬಳಿಕ ಇಲ್ಲಿ ಬಾಂಬ್ ತಯಾರಿಕೆ ಕುರಿತು ಜಗಜ್ಜಾಹಿರಾಗಿತ್ತು.

ಈ ಮನೆಯಲ್ಲಿ ಜೆಎಂಬಿ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ, ಭಾರತ ಮತ್ತು ಬಾಂಗ್ಲಾದೇಶದಲ್ಲಿ ದುಷ್ಕೃತ್ಯಗಳನ್ನು ಎಸಗಲು ತರಬೇತಿ ನೀಡಲಾಗುತ್ತಿತ್ತು ಎನ್ನುವುದು ಎನ್‌ಐಎ ತನಿಖೆಯಿಂದ ದೃಢಪಟ್ಟಿತ್ತು. ಎನ್‌ಐಎ ಅಧಿಕಾರಿಗಳು ತನಿಖೆ ಸಂದರ್ಭದಲ್ಲಿ ಭಾರಿ ಪ್ರಮಾಣದ ಐಇಡಿ, ಗ್ರೆನೇಡ್‌, ತರಬೇತಿ  ವೀಡಿಯೊಗಳನ್ನು ವಶಕ್ಕೆ ಪಡೆದಿದ್ದರು. 

SCROLL FOR NEXT