ದೇಶ

ಈ ವರ್ಷ ದುರ್ಗಾ ಪೂಜೆಯಿಲ್ಲ ಎಂದು ನಾನು ಹೇಳಿದ್ದರೆ ಸಾಬೀತುಪಡಿಸಿ, 100 ಬಾರಿ ಬಸ್ಕಿ ಹೊಡೆಯುತ್ತೇನೆ:ಮಮತಾ ಬ್ಯಾನರ್ಜಿ

Sumana Upadhyaya

ಕೋಲ್ಕತ್ತಾ: ಈ ವರ್ಷ ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯ ದುರ್ಗಾ ಪೂಜೆ ಇಲ್ಲ ಎಂದು ಸರ್ಕಾರ ತೀರ್ಮಾನಿಸಿದೆ ಎಂಬ ಸುಳ್ಳುಸುದ್ದಿ ಸಾಕಷ್ಟು ಹರಿದಾಡುತ್ತಿದೆ. ನಾನು ಹೀಗೆ ಹೇಳಿದ್ದೇನೆ ಎಂದು ಯಾರಾದರೂ ಸಾಬೀತುಪಡಿಸಿದರೆ ಜನರ ಮುಂದೆ 100 ಬಾರಿ ಬಸ್ಕಿ ಹೊಡೆಯುತ್ತೇನೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ರಾಜ್ಯದಲ್ಲಿ ನಡೆಯುವ ದುರ್ಗಾ ಪೂಜೆ ಬಗ್ಗೆ ರಾಜಕೀಯ ಪಕ್ಷವೊಂದು ಸುಳ್ಳು ವದಂತಿ ಹಬ್ಬಿಸುತ್ತಿದೆ. ಇಲ್ಲಿಯವರೆಗೆ ನಾವು ಒಂದು ಸಭೆಯನ್ನು ಕೂಡ ನಡೆಸಿಲ್ಲ. ದುರ್ಗಾ ಪೂಜೆ ಇಲ್ಲ ಎಂದು ಸರ್ಕಾರ ಹೇಳಿದೆ ಎಂದು ಯಾರಾದರೂ ಸಾಬೀತುಪಡಿಸಲಿ ನೋಡೋಣ, ಅಂತವರ ಮುಂದೆ ನಾನು 100 ಬಾರಿ ಬಸ್ಕಿ ಹೊಡೆಯಲು ಸಿದ್ಧಳಿದ್ದೇನೆ ಎಂದು ನಿನ್ನೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪೊಲೀಸ್ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಹೇಳಿದರು.

ಕೆಲವು ನಕಲಿ ಮಾಹಿತಿ ಪುಟಗಳು ದುರ್ಗಾ ಪೂಜೆಯ ಬಗ್ಗೆ ಸುಳ್ಳುಸುದ್ದಿ ಹಬ್ಬಿಸುತ್ತಿವೆ. ಹೀಗೆ ಉದ್ದೇಶಪೂರ್ವಕವಾಗಿ ನಕಲಿ ಸುದ್ದಿ ಹಬ್ಬಿಸುವವರನ್ನು ಪೊಲೀಸರು ಪತ್ತೆಹಚ್ಚಿ ಶಿಕ್ಷೆ ನೀಡಬೇಕು. ಕೋಮು ಸೌಹಾರ್ದತೆಯನ್ನು ನಾಶಗೊಳಿಸಲು ಇಂತಹ ನಕಲಿ ಸುದ್ದಿಗಳನ್ನು ಹಬ್ಬಿಸಲಾಗುತ್ತದೆ. ಕಾಳಿ, ದುರ್ಗೆ ಅಥವಾ ಹನುಮನ ಪೂಜಿಸದವರು ಈ ರೀತಿ ಪೂಜೆಯ ಬಗ್ಗೆ ಮಾತನಾಡುತ್ತಿದ್ದಾರೆ, ಸರ್ಕಾರ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಕೋವಿಡ್-19 ಲಾಕ್ ಡೌನ್ ನ್ನು ಪಶ್ಚಿಮ ಬಂಗಾಳ ಸರ್ಕಾರ ಸೆಪ್ಟೆಂಬರ್ 20ರವರೆಗೆ ಮುಂದೂಡಿದೆ.

SCROLL FOR NEXT