ದೇಶ

ಕೋವಿಡ್-19: 11 ದಿನದಲ್ಲಿ 10 ಲಕ್ಷ  ಸೋಂಕಿತರು, ಭಾರತದಲ್ಲಿ 50 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

Srinivasamurthy VN

ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ ಕೇವಲ 11 ದಿನಗಳ ಅಂತರದಲ್ಲಿ ದೇಶಾದ್ಯಂತ ಬರೊಬ್ಬರಿ 10 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.

ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಮಂಗಳವಾರ ರಾತ್ರಿ ಹೊತ್ತಿಗೆ ದೇಶದಲ್ಲಿನ ಒಟ್ಟಾರೆ ಸೋಂಕಿರತ ಸಂಖ್ಯೆ 50 ಲಕ್ಷ ಗಡಿದಾಟಿದೆ. 11 ದಿನಗಳ ಹಿಂದಷ್ಟೇ ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 40 ಲಕ್ಷ ಗಡಿ ದಾಟಿತ್ತು. ಅದರಂತೆ ಕಳೆದ ಕೇವಲ 11 ದಿನಗಳ ಅಂತರದಲ್ಲಿ ದೇಶದಲ್ಲಿ 10 ಲಕ್ಷ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ನಿನ್ನೆ ರಾತ್ರಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಮಂಗಳವಾರ ರಾತ್ರಿ ಹೊತ್ತಿಗೆ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 50,05,963ಕ್ಕೆ ಏರಿಕೆಯಾಗಿದ್ದು, 39,26,096 ಸೋಂಕಿತರು ಗುಣಮುಖರಾಗಿದ್ದಾರೆ. ಅಂತೆಯೇ ಸೋಂಕಿಗೆ ಬಲಿಯಾದವರ ಸಂಖ್ಯೆ 81,989ಕ್ಕೆ ಏರಿಕೆಯಾಗಿದೆ ಎಂದು ವರದಿ ಮಾಡಿದೆ.

ಇನ್ನು ನಿನ್ನೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದ ಹೆಲ್ತ್ ಬುಲೆಟಿನ್ ವರದಿಯಂತೆ ನಿನ್ನೆ ದೇಶಾದ್ಯಂತ ಒಟ್ಟು 83,809 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಆ ಮೂಲಕ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 49,30,237ಕ್ಕೆ ಏರಿಕೆಯಾಗಿದೆ. ಈ ಪೈಕಿ ಒಟ್ಟಾರೆ 38,59,400 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಅಂತೆಯೇ ನಿನ್ನೆ ಒಂದೇ ದಿನ ದೇಶಾದ್ಯಂತ 1,054 ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ದೇಶದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 80,776ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ ಒಟ್ಟು 9,90,061 ಸಕ್ರಿಯ ಪ್ರಕರಣಗಳಿವೆ ಎಂದು ಹೇಳಲಾಗಿತ್ತು.

ಜಾಗತಕವಾಗಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, ಅಮೆರಿಕ ಮೊದಲ ಸ್ಥಾನದಲ್ಲಿದೆ. ಗುಣಮುಖರ ಪ್ರಮಾಣದಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್ 2 ಮತ್ತು ಅಮೆರಿಕ ಮೂರನೇ ಸ್ಥಾನದಲ್ಲಿದೆ. ಇನ್ನು ಕೊರೋನಾ ಸಾವಿನ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, ಅಮೆರಿಕ ಮೊದಲ ಸ್ಥಾನ ಮತ್ತು ಬ್ರೆಜಿಲ್ 2ನೇ ಸ್ಥಾನದಲ್ಲಿದೆ ಎಂದು ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

SCROLL FOR NEXT