ದೇಶ

ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ಕೇವಲ ನಾಟಕ: ಕಾಂಗ್ರೆಸ್ 

Sumana Upadhyaya

ನವದೆಹಲಿ: ಶಿರೋಮಣಿ ಅಕಾಲಿ ದಳ ನಾಯಕಿ ಹರ್ಸಿಮ್ರತ್ ಕೌರ್ ಬಾದಲ್ ಅವರು ಕೇಂದ್ರ ಸಚಿವ ಸಂಪುಟದಿಂದ ರಾಜೀನಾಮೆ ನೀಡಿದ್ದು ಕೇವಲ ನಾಟಕೀಯವಾಗಿದ್ದು, ಅವರಿಗೆ ನಿಜವಾಗಿಯೂ ರೈತರ ಪರ ಕಾಳಜಿಯಿದ್ದರೆ ಕೇಂದ್ರ ಸಂಪುಟ ರೈತ ಸಂಬಂಧಿ ವಿಧೇಯಕ ತರುವಾಗ ಏಕೆ ಅವರು ವಿರೋಧಿಸಿರಲಿಲ್ಲ ಎಂದು ಪ್ರಶ್ನಿಸಿದೆ.

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹರ್ಸಿಮ್ರತ್ ಕೌರ್ ಅವರ ರಾಜೀನಾಮೆಯನ್ನು ಕೇವಲ ನಾಟಕೀಯ ಎಂದು ಕರೆದಿದ್ದು, ಇದು ಬಹಳ ತಡವಾಗಿ ತೆಗೆದುಕೊಂಡ ಅತಿ ಸಣ್ಣ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.

ಶಿರೋಮಣಿ ಅಕಾಲಿ ದಳ ಹೆಣೆದಿರುವ ನಾಟಕೀಯ ಸರಣಿಯಲ್ಲಿ ಹರ್ಸಿಮ್ರತ್ ಕೌರ್ ಅವರ ರಾಜೀನಾಮೆ ಮತ್ತೊಂದು ಪ್ರಹಸನವಷ್ಟೆ. ಅವರು ರಾಜೀನಾಮೆ ಕೊಟ್ಟಿದ್ದಾರೆ ಹೊರತು ಎನ್ ಡಿಎ ಮೈತ್ರಿಕೂಟದಿಂದ ಹೊರಬಂದಿಲ್ಲ. ಇದು ರೈತರ ಬಗ್ಗೆ ಅವರಿಗಿರುವ ಕಾಳಜಿಯಲ್ಲ, ಬದಲಾಗಿ ತಮ್ಮ ರಾಜಕೀಯ ಅದೃಷ್ಟವನ್ನು ಕಾಪಾಡಿಕೊಳ್ಳಲು, ಇದು ಶಿರೋಮಣಿ ಅಕಾಲಿದಳದ ಅತಿ ಸಣ್ಣ ಮತ್ತು ತಡವಾದ ನಿರ್ಧಾರ ಎಂದು ಅಮರಿಂದರ್ ಸಿಂಗ್ ಟೀಕಿಸಿದ್ದಾರೆ.

ಕಾಂಗ್ರೆಸ್ ನ ಪ್ರಧಾನ ವಕ್ತಾರ ರಂದೀಪ್ ಸುರ್ಜೆವಾಲಾ, ರೈತ ವಿರೋಧಿ ಶಾಸನ, ವಿಧೇಯಕ ಹೆಸರಿನಲ್ಲಿ ಕೇಂದ್ರ ಸಂಪುಟದಿಂದ ಹೊರಬಂದಿರುವ ಹರ್ಸಿಮ್ರತ್ ಕೌರ್ ಬಾದಲ್ ಅವರು ಇನ್ನೂ ಏಕೆ ಎನ್ ಡಿಎ ಮೈತ್ರಿಕೂಟದಲ್ಲಿದ್ದಾರೆ. ಲೋಕಸಭಾ ಸದಸ್ಯೆ ಸ್ಥಾನಕ್ಕೆ ಅವರೇಕೆ ರಾಜೀನಾಮೆ ನೀಡಿಲ್ಲ ಎಂದು ಕೇಳಿದ್ದಾರೆ. 

ನಿಜವಾಗಿಯೂ ರೈತರ ಪರ ಕಾಳಜಿ ಹೊಂದಿದ್ದರೆ ಅಕಾಲಿ ದಳ ಈ ಹೊತ್ತಿನಲ್ಲಿ ಸತ್ಯದ ಪರವಾಗಿ ನಿಲ್ಲಬೇಕು, ಕೇಂದ್ರ ಸಂಪುಟ ಅನುಮೋದನೆ ನೀಡುವಾಗ ಹರ್ಸಿಮ್ರತ್ ಕೌರ್ ಅವರು ರೈತ ವಿರೋಧಿ ವಿಧೇಯಕವನ್ನು ವಿರೋಧಿಸಿರಲಿಲ್ಲವೇಕೆ ಎಂದು ಕೇಳಿದ್ದಾರೆ. 

SCROLL FOR NEXT