ದೇಶ

ಹಲವು ತಿಂಗಳ ನಂತರ ಪ್ರಧಾನಿ ಭೇಟಿಯಾದ ಮುಖ್ಯಮಂತ್ರಿ ಬಿಎಸ್ ವೈ, ಸಂಪುಟ ವಿಸ್ತರಣೆಗೆ ಅನುಮತಿ ಕೋರಿಕೆ

Nagaraja AB

ಬೆಂಗಳೂರು: ಹಲವು ತಿಂಗಳ ವಿಫಲ ಪ್ರಯತ್ನ ಮತ್ತು ಮುಂದೂಡಿಕೆಗಳ ನಂತರ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.

ಪಾರ್ಲಿಮೆಂಟ್ ಹೌಸ್ ನಲ್ಲಿ 15 ನಿಮಿಷಗಳ ಭೇಟಿಯ ಅಂತ್ಯದಲ್ಲಿ ನವೆಂಬರ್ 19 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಟೆಕ್ ಶೃಂಗಸಭೆಯ ವರ್ಚುಯಲ್ ಉದ್ಘಾಟನೆಗೆ ಆಹ್ವಾನಿಸಿದರು. 

ನಾನಾ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ  ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಧರ್ಮೇಂದ್ರ ಪ್ರಧಾನ್ ಅವರನ್ನು ಯಡಿಯೂರಪ್ಪ ಭೇಟಿಯಾದರು.ಇಂದು ಸಂಜೆ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಯಡಿಯೂರಪ್ಪ ಭೇಟಿಯಾಗುವ ನಿರೀಕ್ಷೆಯಿದೆ.

ಕೋವಿಡ್-19 ನಿರ್ಬಂಧದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಭೇಟಿ ವೇಳೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಮಾತ್ರ ಯಡಿಯೂರಪ್ಪ ಅವರ ಜೊತೆಯಲ್ಲಿದ್ದರು. ಭೇಟಿ ವೇಳೆಯಲ್ಲಿ ಪ್ರವಾಹ ಪರಿಹಾರ, ಕುಡಿಯುವ ನೀರಿನ ಯೋಜನೆಗಳನ್ನು ಇತ್ಯರ್ಥಪಡಿಸುವಂತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಸಂಪುಟ ವಿಸ್ತರಣೆಗೆ ಪ್ರಧಾನಿ ಬಳಿ ಅನುಮೋದಿ ಕೋರಿರುವ ಮುಖ್ಯಮಂತ್ರಿ, ಜೆ. ಪಿ. ನಡ್ಡಾ ಅವರೊಂದಿಗೆ ಮುಂದಿನ ಚರ್ಚೆ ನಡೆಸಲಿದ್ದಾರೆ.

ಅಮಿತ್ ಶಾ ಅವರ ಅನುಪಸ್ಥಿತಿಯಲ್ಲಿ ಕೇಂದ್ರ ನಾಯಕರು, ಸಂಪುಟದಲ್ಲಿ ಹೊಸ ಮುಖಗಳಿಗೆ ಮಣೆಹಾಕಲಿದ್ದಾರೆಯೇ ಅಥವಾ ಸಂಪುಟದಲ್ಲಿ ಹೆಚ್ಚುವರಿ ಸ್ಥಾನಗಳನ್ನು ಕಲ್ಪಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಅನುದಾನವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಪ್ರಧಾನಿ ಬಳಿ ಮನವಿ ಮಾಡಿಕೊಂಡಿದ್ದಾರೆ. ರಾಜ್ಯ ಪ್ರವಾಹ ನಿರ್ವಹಣಾ ನಿಧಿ ಅಥವಾ ರಾಷ್ಟ್ರೀಯ ನಿರ್ವಹಣಾ ನಿಧಿಯಲ್ಲಿನ ನಿಯಮಗಳನ್ನು ಪರಿಷ್ಕರಿಸಿ ಸಂಕಷ್ಟಕ್ಕೊಳಗಾಗಿರುವ ಜನರಿಗೆ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಕೋರಿದ್ದಾರೆ. ಕೃಷ್ಣಾ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸುವಂತೆ ಪ್ರಧಾನಿಯನ್ನು ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಮೇಕೆದಾಟು ಮತ್ತು ಕಳಸಾ- ಬಂಡೂರಿ ನಾಲಾ ಕುಡಿಯುವ ನೀರಿನ ಯೋಜನೆಯನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಪ್ರಧಾನಿ ಬಳಿ ಯಡಿಯೂರಪ್ಪ ಮನವಿ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

SCROLL FOR NEXT