ದೇಶ

ಲೋಕಸಭೆಯಲ್ಲಿ ಪಿಎಂ ಕೇರ್ಸ್ ಜಟಾಪಟಿ, ಸಚಿವ ಅನುರಾಗ್ ಠಾಕೂರ್ ರನ್ನು 'ಚೋಕ್ರ' ಎಂದು ಜರಿದ ಕಾಂಗ್ರೆಸ್

Lingaraj Badiger

ನವದೆಹಲಿ: ಲೋಕಸಭೆಯಲ್ಲಿ ಪಿಎಂ ಕೇರ್ಸ್ ಗೆ ಸಂಬಂಧಿಸಿದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಜಟಾಪಟಿ ನಡೆದಿದ್ದು, ಕಾಂಗ್ರೆಸ್ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು 'ಚೋಕ್ರ' ಎಂದು ಜರಿದಿದೆ.

ಇಂದು ಲೋಕಸಭೆಯಲ್ಲಿ ಪಿಎಂ ಕೇರ್ಸ್ ಬೆಂಬಲಿಸಿ ಮಾತನಾಡುತ್ತಿದ್ದ ಅನುರಾಗ್ ಠಾಕೂರ್, ಸುಪ್ರೀಂಕೋರ್ಟ್‌ನಿಂದ ಹಿಡಿದು ಸಮಸ್ತ ದೇಶ ಪಿಎಂ ಕೇರ್ಸ್ ಪರವಾಗಿದ್ದರೆ ಕಾಂಗ್ರೆಸ್ ಮಾತ್ರ ಈ ಕುರಿತು ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದರು.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ 1948ರಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಸ್ಥಾಪಿಸಿದ್ದರು. ಆದರೆ ಇದುವರೆಗೂ ಅದರ ನೋಂದಣಿಯಾಗಿಲ್ಲ. ಕಾಂಗ್ರೆಸ್‌ನವರು ಕೇವಲ ಗಾಂಧಿ ಪರಿವಾರದ ಲಾಭಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಅನುರಾಗ್ ಠಾಕೂರ್ ಗಂಭೀರ ಆರೋಪ ಮಾಡಿದರು.

ಠಾಕೂರ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಲೋಕಸಭೆ ಕಾಂಗ್ರೆಸ್‌ ನಾಯಕ ಅಧೀರ್ ರಂಜನ್ ಚೌಧರಿ, ಅಪ್ರಬುದ್ಧವಾಗಿ ಮಾತನಾಡುವ ಹಿಮಾಚಲದ ಈ ಹುಡುಗ ಯಾರು ಎಂದು ಪ್ರಶ್ನಿಸಿದರು.

ಪಿಎಂ ಕೇರ್ಸ್ ವಿಷಯದಲ್ಲಿ ಅನವಶ್ಯಕವಾಗಿ ನೆಹರೂ-ಗಾಂಧಿ ಪರಿವಾರದ ಹೆಸರನ್ನು ಎಳೆದು ತಂದ ಅನುರಾಗ್ ಠಾಕೂರ್ ಅವರು ಈ ಕೂಡಲೇ ಕ್ಷಮೆ ಕೋರಬೇಕೆಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.

ಅಲ್ಲದೇ ಅನುರಾಗ್ ಠಾಕೂರ್ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ಆರಂಭಿಸಿದರು. ವಾಕ್ಸಮರ ತೀವ್ರವಾದ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸದನವನ್ನು ಮುಂದೂಡಿದರು. ಈ ಮೂಲಕ ಪ್ರಸಕ್ತ ಮುಂಗಾರು ಅಧಿವೇಶನ ಮೊದಲ ಕಲಾಪ ಮುಂದೂಡಿಕೆಗೆ ಸಾಕ್ಷಿಯಾಯಿತು.

SCROLL FOR NEXT