ದೇಶ

ಚೀನಾದೊಂದಿಗೆ ಮಾತುಕತೆ ಸಾಧ್ಯವಾದರೆ ಪಾಕಿಸ್ತಾನದ ಜೊತೆಗೇಕಿಲ್ಲ?: ಕೇಂದ್ರ ಸರ್ಕಾರಕ್ಕೆ ಫಾರೂಕ್ ಅಬ್ದುಲ್ಲಾ ಪ್ರಶ್ನೆ

Srinivasamurthy VN

ನವದೆಹಲಿ: ಲಡಾಖ್ ಸಂಘರ್ಷದಲ್ಲಿ ಭಾರತದ 20 ಯೋಧರನ್ನು ಕೊಂದ ಚೀನಾದೊಂದಿಗೆ ಮಾತುಕತೆ ಸಾಧ್ಯವಾದರೆ ಪಾಕಿಸ್ತಾನದ ಜೊತೆಗೇಕಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಗೃಹ ಬಂಧನದಿಂದ ಬಿಡುಗಡೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, 20 ಜನ ಯೋಧರ ಸಾವಿಗೆ ಕಾರಣವಾದ ಲಡಾಖ್ ಗಡಿ ತಕರಾರು ಇತ್ಯರ್ಥಕ್ಕೆ ಭಾರತ-ಚೀನಾ ನಡುವೆ ರಾಜತಾಂತ್ರಿಕ ಮಾತುಕತೆಗಳು ಸಾಧ್ಯವಾದರೆ, ನೆರೆಯ ಮತ್ತೊಂದು  ದೇಶ(ಪಾಕಿಸ್ತಾನ)ದೊಂದಿಗೆ ಏಕೆ ಸಾಧ್ಯವಿಲ್ಲ?... ಕಣಿವೆಯಲ್ಲಿನ ಹಿಂಸಾಚಾರ ತಗ್ಗಿಸಲು ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಮಾತುಕತೆಗಳನ್ನು ಆರಂಭಿಸಬೇಕು. ಭಾರತ-ಪಾಕ್ ಗಡಿಯಲ್ಲಿ ನಡೆಯುತ್ತಿರುವ ನಿರಂತರ ಸಂಘರ್ಷದಿಂದ ಜನಸಾಮಾನ್ಯರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜನಸಾಮಾನ್ಯರ ಜೀವ  ಉಳಿಸಲು ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆಯನ್ನು ನಿಲ್ಲಿಸಬೇಕಿದ್ದು, ರಾಜತಾಂತ್ರಿಕ ಮಾತುಕತೆಗಳಿಂದ ಮಾತ್ರ ಇದು ಸಾಧ್ಯ ಎಂದು ಹೇಳಿದ್ದಾರೆ.

ಅಂತೆಯೇ ಲಡಾಖ್ ಗಡಿಯಲ್ಲಿ ಉದ್ಭವವಾಗಿರುವ ಗಡಿ ತಕರಾರನ್ನು ಬಗೆಹರಿಸಲು ಭಾರತ-ಚೀನಾ ನಡುವೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿವೆ. ಆದರೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿನ ಸಮಸ್ಯೆಗಳನ್ನೂ ಬಗೆಹರಿಸಲು ಭಾರತ-ಪಾಕ್ ನಡುವೆ ರಾಜತಾಂತ್ರಿಕ ಮಾತುಕತೆಗಳು ನಡೆಯಬೇಕು  ಎಂದು ಆಗ್ರಹಿಸಿದರು.  

ದೇಶದ ಇತರೆಡೆ ಇರುವ ಹಕ್ಕು ಕಾಶ್ಮೀರಕ್ಕೂ ಬೇಕು
ಜಮ್ಮು ಕಾಶ್ಮೀರದಲ್ಲಿ ಪ್ರಗತಿಯಾಗುತ್ತಿಲ್ಲ. ಜಮ್ಮು ಕಾಶ್ಮೀರದ ಸ್ಥಿತಿ ಹೇಗಿದೆಯೆಂದರೆ ಪ್ರಗತಿಯಾಗಬೇಕಾದಲ್ಲಿ ಪ್ರಗತಿ ಇಲ್ಲ. ಇಂದು ದೇಶದ ಇತರೆಡೆಗಳಲ್ಲಿ ಇರುವಂತೆ ನಮ್ಮ ಮಕ್ಕಳಿಗೆ, ಅಂಗಡಿಯವರಿಗೆ 4ಜಿ ಸೌಲಭ್ಯ ಇಲ್ಲ. ಪ್ರತಿಯೊಂದೂ ಇಂಟರ್‌ನೆಟ್ ಸೌಲಭ್ಯವನ್ನು ಅವಲಂಬಿಸಿರುವಾಗ ಅವರು ಹೇಗೆ  ಓದಬೇಕು, ಶಿಕ್ಷಣ ಪಡೆಯಬೇಕು. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರ ಪ್ರಗತಿ ಸಾಧಿಸಬೇಕಾದರೆ ದೇಶದ ಇತರೆಡೆಗಳಂತೆ ಎಲ್ಲ ಹಕ್ಕುಗಳು ಲಭ್ಯವಾಗಬೇಕು. "ಭಾರತ ಇಂದು ಪ್ರಗತಿ ಸಾಧಿಸುತ್ತಿದ್ದರೆ, ದೇಶದ ಇತರ ಭಾಗಗಳಂತೆ ಅಭಿವೃದ್ಧಿಯಾಗುವ ಹಕ್ಕು ಜಮ್ಮು ಮತ್ತು ಕಾಶ್ಮೀರಕ್ಕೆ ಇಲ್ಲವೇ ಎಂದು  ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

ಇದೇ ವೇಳೆ ಶೋಪಿಯಾನ್ ಎನ್‌ಕೌಂಟರ್‌ನಲ್ಲಿ ಮೂವರು ಪ್ರಮಾದವಶಾತ್ ಬಲಿಯಾಗಿದ್ದಾರೆ ಎಂದು ಸೇನೆ ಒಪ್ಪಿಕೊಂಡಿದೆ. ಆದ್ದರಿಂದ ಸರ್ಕಾರ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು ಎಂದು ಶ್ರೀನಗರ ಸಂಸದರೂ ಆಗಿರುವ ಫಾರೂಕ್ ಅಬ್ದುಲ್ಲಾ ಆಗ್ರಹಿಸಿದರು.

SCROLL FOR NEXT